ಗೋರಖ್ ಪುರ: ಬಾವಿಗೆ ಬಿದ್ದು 9ಮಂದಿ ಬಾಲಕಿಯರು ಸೇರಿದಂತೆ 11 ಮಂದಿ ದುರಂತ ಸಾವು; ಕಾರಣವೇನು ಗೊತ್ತೇ?

ಗೋರಖ್‌ಪುರ: ಇಲ್ಲಿನ ಖುಷಿನಗರ ಎಂಬ ಜಿಲ್ಲೆಯಲ್ಲಿ ವಿವಾಹದ ವಿಧಿವಿಧಾನದ ವೇಳೆ ಬಾವಿಗೆ ಬಿದ್ದು ಒಂಬತ್ತು ಮಂದಿ ಬಾಲಕಿಯರು ಸೇರಿದಂತೆ 11 ಮಂದಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ದುರಂತದಲ್ಲಿ ಗಾಯಗೊಂಡ ಹಲವಾರು ಮಂದಿ ಮಹಿಳೆಯರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ದುರ್ಘಟನೆಯ ಬಗ್ಗೆ ತೀವ್ರ ಆಘಾತವನ್ನು ವ್ಯಕ್ತಪಡಿಸಿರುವ ಯುಪಿ‌ ಸಿಎಂ ಆದಿತ್ಯನಾಥ್‌ ಅವರು, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 


ಖುಷಿನಗರ ಜಿಲ್ಲೆಯ ನೌಬಿಯಾ ನವರಂಗಪುರದಲ್ಲಿ ಮದುವೆಯ 'ಹಲ್ದಿ’ ಶಾಸ್ತ್ರಕ್ಕಾಗಿ ಮಹಿಳೆಯರು ಬಾವಿಯ ಸುತ್ತ ನೆರಿದಿದ್ದರು. ಆದರೆ ಬಾವಿಕಟ್ಟೆಯು ಭಾರ ತಡೆದುಕೊಳ್ಳದೇ ಹಠಾತ್ತನೇ ಕುಸಿದಿದೆ. ಪರಿಣಾಮ ಬಾಲಕಿಯರು ಸೇರಿದಂತೆ ಹಲವು ಮಂದಿ ಮಹಿಳೆಯರು ಬಾವಿಗೆ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕೆಲ ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆಂಬ ಶಂಕೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.