4 ವರ್ಷದ ಬಾಲಕಿಯನ್ನು ಅಪಹರಿಸಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ, ದಂಡ

ಕಲಬುರಗಿ: ತಾಯಿಯೊಂದಿಗೆ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಹೊತ್ತೊಯ್ದು ಆಕೆ ಮೇಲೆ ಬಲಾತ್ಕಾರಕ್ಕೆ ಯತ್ನಿಸಿರುವ ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 45 ಸಾವಿರ ರೂ. ದಂಡ ವಿಧಿಸಿ 2ನೇ ಅಪರ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಚಿಂಚೋಳಿ ತಾಲೂಕಿನ ಮಿರಿಯಾಣ ಗ್ರಾಮ ನಿವಾಸಿ ಪ್ರವೀಣ್‌ ಹಿರೇಮಠ ಎಂಬಾತನೇ ಶಿಕ್ಷೆಗೊಳಗಾದ ಅಪರಾಧಿ. ಈತ ನಗರದ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ 2020ರ ಫೆ.25ರಂದು ಬೆಳಗಿನ ಜಾವ ತನ್ನ ತಾಯಿಯೊಂದಿಗೆ ಮಲಗಿದ್ದ 4 ವರ್ಷದ ಬಾಲಕಿಯನ್ನು ಅಪಹರಿಸಿ ಗೋವಾ ಹೋಟೆಲ್‌ ಸಮೀಪಕ್ಕೆ ಕರೆತಂದು ಬಲಾತ್ಕಾರಕ್ಕೆ ಯತ್ನಿಸಿದ್ದ. ಈ ಸಂದರ್ಭ ಬಾಲಕಿ ಅಳುತ್ತಿರುವುದನ್ನು ಗಮನಿಸಿ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದರು. 

ತಕ್ಷಣ ಬಾಲಕಿಯ ತಂದೆ ಬ್ರಹ್ಮಪುರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಆಗಿನ ಸಿಪಿಐ ಕಪಿಲ್‌ದೇವ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಮಾಡಿದ ನ್ಯಾಯಾಧೀಶೆ ಹೇಮಾವತಿ ಪ್ರವೀಣ್ ಮೇಲಿನ ಆರೋಪ ಸಾಬೀತುಗೊಂಡು ಹಿನ್ನೆಲೆಯಲ್ಲಿ ಆತನನ್ನು ಅಪರಾಧಿ ಎಂದು ಘೋಷಿಸಿ, ಪೊಕ್ಸೊ ಕಾಯ್ದೆಯಡಿ 3 ವರ್ಷ ಜೈಲು ಶಿಕ್ಷೆ ಮತ್ತು 45 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ, ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 1 ಲಕ್ಷ ರೂ. ಪರಿಹಾರ ಹಾಗೂ ದಂಡದ ಹಣದಲ್ಲಿ 40 ಸಾವಿರ ರೂ. ನೀಡಬೇಕೆಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಶಾಂತವೀರ ತುಪ್ಪದ ವಾದ ಮಂಡಿಸಿದ್ದರು.