2019ರಿಂದ ಕಾಣೆಯಾಗಿದ್ದ ಹೆಣ್ಣು ಮಗು ರಹಸ್ಯ ಕತ್ತಲೆ ಕೋಣೆಯಲ್ಲಿ ಪತ್ತೆ!

ನ್ಯೂಯಾರ್ಕ್: ಅಮೆರಿಕಾದಲ್ಲಿ 2019ರಿಂದ ನಾಪತ್ತೆಯಾಗಿರುವ 6 ವರ್ಷದ ಬಾಲಕಿಯನ್ನು, ಮನೆಯ ಮಹಡಿಗೆ ಹೋಗುವ ಮೆಟ್ಟಿಲಿನ ಕೆಳಗಿದ್ದ ರಹಸ್ಯ ಕತ್ತಲು ಕೋಣೆಯಲ್ಲಿ ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.  

ಪೈಸ್ಲೀ ಶುಲ್ಟಿಸ್ ಎಂಬ 6 ವರ್ಷದ ಬಾಲಕಿ 2019ರಿಂದ ನಾಪತ್ತೆಯಾಗಿದ್ದಳು. ಮಗುವಿನ ಪೋಷಣೆಗೆ ಸಂಬಂಧಿಸಿದಂತೆ ಕಾನೂನು ಕಟ್ಟಲೆಯಲ್ಲಿ ಹಿನ್ನಡೆ ಅನುಭವಿಸಿರುವ ಮಗುವಿನ ಜೈವಿಕ ಪೋಷಕರಾದ ಕಿಂಬರ್ಲಿ ಹಾಗೂ ಕಿರ್ಕ್ ಮಗುವನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ 2.50 ವರ್ಷಗಳ ಹುಡುಕಾಟದ ಬಳಿಕ, ಮಗು ಸುಮಾರು 240 ಕಿ.ಮೀ. ದೂರದ ಸ್ಪೆನ್ಸರ್ ನಗರದಲ್ಲಿ ರಹಸ್ಯ ಸ್ಥಳದಲ್ಲಿ ಇದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.  

ಆ ಪ್ರದೇಶಕ್ಕೆ ಧಾವಿಸಿರುವ ಪೊಲೀಸರು ಅಲ್ಲಿನ ಮನೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಶೋಧ ನಡೆಸಿದ್ದಾರೆ. ಆಗ ಮನೆಯ ಮಹಡಿಯ ಮೆಟ್ಟಿಲಿನ ಕೆಳಗಡೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ರಹಸ್ಯ ಕೋಣೆಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಅಪಹರಣ ಮಾಡಿದ್ದ ಕಿಂಬರ್ಲಿ ಕೂಡಾ ಆ ಕತ್ತಲ ಕೋಣೆಯಲ್ಲಿ ಅಡಗಿದ್ದಳು ಎಂದು ಪೊಲೀಸ್ ಮುಖ್ಯಸ್ಥ ಜೋಸೆಫ್ ಸಿನಾಗ್ರಾ ಹೇಳಿದ್ದಾರೆ.

ಇದಕ್ಕೂ ಮುನ್ನ ಹಲವಾರು ಬಾರಿ ಈ ಮನೆಗೆ ಬಂದು ಪೊಲೀಸರು ಶೋಧ ನಡೆಸಿದರೂ ಮನೆಯವರು ನಮ್ಮೊಡನೆ ಬಾಲಕಿ ಇಲ್ಲ ಎಂದು ಸುಳ್ಳು ಹೇಳಿದ್ದರು. ಪುತ್ರಿ ಎಲ್ಲಿದ್ದಾಳೆ ಎಂಬ ಮಾಹಿತಿಯಿಲ್ಲ ಎಂದು ಬಾಲಕಿಯ ತಂದೆ ಹೇಳಿದ್ದರು. ಈಗ ಮಗುವನ್ನು ಪತ್ತೆಹಚ್ಚಲಾಗಿದ್ದು ಆರೋಗ್ಯವಾಗಿದೆ. 

ಪೊಲೀಸರು ಬಾಲಕಿಯನ್ನು ಕತ್ತಲು ಕೋಣೆಯಿಂದ ಹೊರಗೆ ಕರೆತಂದಾಗ ಆಕೆ ತನಗೆ ಮೆಕ್‌ಡೊನಾಲ್ಡ್‌ನ ಊಟ ತರಿಸಿಕೊಡುವಂತೆ  ಕೋರಿದ್ದಳು ಎನ್ನಲಾಗಿತ್ತು. ಅಜ್ಜನ ಮನೆಯಲ್ಲಿ ಮಗುವನ್ನು ಅಡಗಿಸಿಡಲಾಗಿತ್ತು. ಮಗುವಿನ ಪ್ರಾಣಕ್ಕೆ ಅಪಾಯ ತರುವ, ಅಪರಾಧ ಎಸಗಿರುವ ಹಾಗೂ ನ್ಯಾಯಾಲಯದ ಪ್ರಕ್ರಿಯೆಗೆ ಅಡ್ಡಿಪಡಿಸಿದ ಪ್ರಕರಣದ ಮೇಲೆ ಪೋಷಕರ ವಿರುದ್ಧ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu