
ಕಿಮ್ಸ್ ಆಸ್ಪತ್ರೆಯಲ್ಲಿ 2ವರ್ಷದ ಕಂದಮ್ಮ ಸಾವು: ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ ಪಾಲಕರು
2/18/2022 06:55:00 PM
ಹುಬ್ಬಳ್ಳಿ: ವೈದ್ಯರ ನಿರ್ಲಕ್ಷ್ಯ ಎರಡು ವರ್ಷದ ಪುಟ್ಟ ಕಂದಮ್ಮನನ್ನು ಬಲಿ ಪಡೆದಿದೆ ಎಂದು ಆರೋಪಿಸಿ ಹೆತ್ತವರು, ಕುಟುಂಬಸ್ಥರು ಕಿಮ್ಸ್ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಹುಬ್ಬಳ್ಳಿಯ ತಾಜ್ ನಗರದ 2 ವರ್ಷದ ರಕ್ಷಾ ಚೌಧರಿ ಮೃತ ದುರ್ದೈವಿ.
ರಕ್ಷಾ ಚೌಧರಿ ಎಂಬ ಮಗುವಿನ ಬಾಯಿ ಒಳಗೆ ಸಣ್ಣ ಗಡ್ಡೆಯಾಗಿತ್ತು. ಚಿಕಿತ್ಸೆಗೆಂದು ಪಾಲಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪಾಲಕರ ಅನುಮತಿ ಪಡೆಯದೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆ ಬಳಿಕ ತೀವ್ರ ರಕ್ತಸ್ರಾವವಾಗಿತ್ತು. ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ರಕ್ತಸ್ರಾವ ನಿಲ್ಲದ ಕಾರಣ ವಾಪಸ್ ಕಿಮ್ಸ್ಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಿಮ್ಸ್ಗೆ ಬಂದ ಬಳಿಕ ಮಗು ಮೃತಪಟ್ಟಿದೆ ಎಂದು ಪಾಲಕರು ಆರೋಪಿಸುತ್ತಾ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಆಸ್ಪತ್ರೆಗೆ ದಾಖಲು ಮಾಡುವವರೆಗೆ ಚೆನ್ನಾಗಿದ್ದ ಮಗು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದೆ. ಮೃತಪಟ್ಟ ಬಳಿಕ ನಿನ್ನೆ ದಿನಾಂಕ ಹಾಕಿ ಸಹಿ ಪಡೆಯಲಾಗಿದೆ ಎಂದು ಪಾಲಕರು ಆಕ್ರೋಶ ಹೊರಹಾಕಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ವೈದ್ಯರ ನಿರ್ಲಕ್ಷ್ಯವಾಗಿಲ್ಲ. ಸರಿಯಾದ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.