ಬಸ್ ಡಿಕ್ಕಿಯಿಂದ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆದ ಸ್ಕೂಟರ್: ವೀಡಿಯೋ ವೈರಲ್‌

ಮಂಗಳೂರು: ಅತೀ ವೇಗವಾಗಿ ಸ್ಕೂಟರ್‌ ಚಲಾಯಿಸಿಕೊಂಡು ಬಂದಿರುವ ಯುವಕನೋರ್ವನು ಬಸ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿ ಗೇಟ್‌ ಒಂದಕ್ಕೆ ಕಬ್ಬಿಣದ ರಾಡ್ ಹಾಗೂ ಮರವೊಂದರ ನಡುವಿನ ಸಣ್ಣ ಅಂತರದಲ್ಲಿ ನುಸುಳಿಕೊಂಡು ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಅಂಬ್ಲಿಮೊಗರು ಗ್ರಾಮದ ಎಲ್ಯಾರ್‌ಪದವು ಬಳಿ ನಡೆದಿದೆ.




ಇದೀಗ ಯುವಕನು ಸಿನಿಮೀಯ ಶೈಲಿಯಲ್ಲಿ ಅಪಘಾತದಿಂದ ಪಾರಾಗಿ ಸ್ಕೂಟರ್‌ ಚಲಾಯಿಸಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ  ವೈರಲ್‌ ಆಗುತ್ತಿದೆ. 




ಮಂಗಳೂರಿನಿಂದ ಎಲ್ಯಾರ್‌ ಕಡೆ ಸಂಚರಿಸುವ ರೂಟ್‌ ನಂಬರ್‌ 44ರ ಖಾಸಗಿ ಬಸ್ಸೊಂದು ಎಲ್ಯಾರ್‌ ಪದವಿನಿಂದ ಸ್ವಲ್ಪ ಮುಂದೆ ಇರುವ ಇಂಡೋ ಫಿಶರಿಸ್‌ ನ ಮುಂಭಾಗ ವಾಪಾಸ್‌ ಮಂಗಳೂರಿಗೆ ತೆರಳಲು ತಿರುಗುತ್ತಿತ್ತು. ಈ ಸಂದರ್ಭ ವೇಗವಾಗಿ ಬಂದ ಸ್ಕೂಟರೊಂದು ಬಸ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿ ಮೀನು ಸಂಸ್ಕರಣಾ ಘಟಕದ ಬದಿಯಲ್ಲಿದ್ದ ಅಂಗಡಿಯೊಂದರ ಮೇಲ್ಛಾವಣೆಗೆ ಹಾಕಿದ ಕಬ್ಬಿಣದ ರಾಡ್‌ ಮತ್ತು ಆದರ ಬದಿಯಲ್ಲಿದ್ದ ಮರದ ನಡುವೆ ಸ್ಕೂಟರ್‌ ಅದೇ ವೇಗದಲ್ಲಿ ಸಂಚರಿಸಿದೆ. ಮರ ಮತ್ತು ರಾಡ್‌ ನಡುವೆ ಒಂದು ಸ್ಕೂಟರ್‌ ಕಷ್ಟದಲ್ಲಿ ಹೋಗುವಷ್ಟು ಮಾತ್ರ ಸ್ಥಳವಿದ್ದರೂ ಸವಾರ ಚಾಕಚಕ್ಯತೆಯಿಂದ ಸ್ಕೂಟರ್‌ ಚಲಾಯಿಸಿರುವುದು ವೈರಲ್‌ ಆಗಲು ಕಾರಣವಾಗಿದೆ.