ಮದುವೆಯಾದರೂ ಹಳೆಯ ಪ್ರೇಮ ಸಂಬಂಧ ತೊರೆಯಲಾಗದೆ ಮನೆ ಬಿಟ್ಟು ಓಡಿಬಂದವರು ದುರಂತ ಅಂತ್ಯ ಕಂಡರು!

ಬೆಂಗಳೂರು: ವಿವಾಹದ ಬಳಿಕವೂ ಹಳೆಯ ಪ್ರೇಮಪ್ರಕರಣಕ್ಕೆ ಇತಿಶ್ರೀ ಹಾಡದೆ ಪ್ರೀತಿಯನ್ನು ಮುಂದುವರಿಸಿದ್ದ ಯುವತಿ, ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿ ಬಂದು ಇಬ್ಬರೂ ಜೊತೆಯಾಗಿ ಪ್ರಾಣವನ್ನೂ ಕಳೆದುಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. 

ರಾಯಚೂರು ಮೂಲದ ಬಸವರಾಜ್(28) ಹಾಗೂ ಜ್ಯೋತಿ (26) ಮೃತಪಟ್ಟ ದುರ್ದೈವಿಗಳು.  

ಜ್ಯೋತಿಗೆ ಈಗಾಗಲೇ ಬೇರೆ ಮದುವೆಯಾಗಿದೆ. ಆದರೆ ಹಳೆಯ ಪ್ರೇಮಿ ಬಸವರಾಜ್ ನ ಒಡನಾಟವನ್ನು ಬಿಡಲಾಗದೆ ಆತನೊಂದಿಗೆ ಬೆಂಗಳೂರಿಗೆ ಓಡಿ ಬಂದಿದ್ದಳು. ಕಳೆದ 20 ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಇಬ್ಬರೂ ಬಂದಿದ್ದರು. ತಾವಿಬ್ಬರೂ ಪತಿ - ಪತ್ನಿಯೆಂದು ಹೇಳಿ ದೇವನಹಳ್ಳಿಯ ಶಾಂತಿನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. 

ಆದರೆ ಆ ಬಳಿಕ ಅದೇನಾಯಿತೋ ಗೊತ್ತಿಲ್ಲ, ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿನ್ನೆ ಮನೆಯೊಳಗಿನಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ಮನೆಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.