-->

ಪ್ರಭಾವಿ ರಾಜಕೀಯ ನಾಯಕನ ಕಿರುಕುಳದಿಂದ ಬೇಸತ್ತ ಮಹಿಳಾ ಅಧಿಕಾರಿ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನ: ತಡವಾಗಿ ಪ್ರಕರಣ ಬಯಲು

ಪ್ರಭಾವಿ ರಾಜಕೀಯ ನಾಯಕನ ಕಿರುಕುಳದಿಂದ ಬೇಸತ್ತ ಮಹಿಳಾ ಅಧಿಕಾರಿ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಯತ್ನ: ತಡವಾಗಿ ಪ್ರಕರಣ ಬಯಲು

ಪಂಪಾರಡ್ಡಿ ಅರಳಹಳ್ಳಿ ಕಾರಟಗಿ (ಕೊಪ್ಪಳ): ಭಾರೀ ಸಂಚಲನ ಸೃಷ್ಟಿಸಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಮತ್ತು ಡಿವೈಎಸ್ಪಿ ಎಂ.ಕೆ.ಗಣೇಶ ಆತ್ಮಹತ್ಯೆ ಪ್ರಕರಣದಂತೆಯೇ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಮಹಿಳಾ ಸರಕಾರಿ ಅಧಿಕಾರಿಯೊಬ್ಬರು ಕಳೆದ ಡಿ.13ರಂದು ಸಂಜೆ ಬಿಜೆಪಿ ಚುನಾಯಿತ ಪ್ರತಿನಿಧಿ ಹಾಗೂ ಪ್ರಭಾವಿ ನಾಯಕರೊಬ್ಬರೊಂದಿಗೆ ದೂರವಾಣಿಯಲ್ಲಿ ಆವೇಶಭರಿತವಾಗಿ ಮಾತನಾಡುತ್ತಲೇ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ. ಈ ಪ್ರಕರಣ ಇದೀಗ ಜಿಲ್ಲೆಯಲ್ಲಿ‌ಭಾರೀ ಸಂಚಲನ ಮೂಡಿಸಿದೆ.

ಆತ್ಮಹತ್ಯೆಗೆ ಯತ್ನಿಸಿರುವ ಮಹಿಳಾ ಅಧಿಕಾರಿ, ಪ್ರಭಾವಿ ನಾಯಕರೋರ್ವರೊಂದಿಗೆ ದೂರವಾಣಿ ಮೂಲಕ ಸುದೀರ್ಘ ವಾಗ್ವಾದ ನಡೆಸಿದ್ದಾರೆ. ಬಳಿಕ ಕಚೇರಿಯ ಬಾಗಿಲು ಮುಚ್ಚಿಕೊಂಡು ಸೀರೆಯ ಸೆರಗಿನಿಂದಲೇ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾರೆ. ಈ ಬಗ್ಗೆ ತಿಳಿದುಕೊಂಡ ಕಚೇರಿಯ ಸಿಬ್ಬಂದಿ ಬಾಗಿಲನ್ನು ಮುರಿದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿ ಸಂತೈಸಿದ್ದಾರೆ. ಬಳಿಕ ತುಸು ಚೇತರಿಸಿಕೊಂಡ ಮಹಿಳಾಧಿಕಾರಿ, ಇಲಾಖೆಯ ಕಾರಿನಲ್ಲಿ ಚುನಾಯಿತ ಪ್ರತಿನಿಧಿಯ ವಿರುದ್ಧ ದೂರು ನೀಡಲು ಎಸ್ಪಿ ಕಚೇರಿಗೆ ತೆರಳಲು ನಿರ್ಧರಿಸಿದ್ದರು. 

ಕೊಪ್ಪಳಕ್ಕೆ ತೆರಳುತ್ತಿದ್ದ ಇವರ ಕಾರನ್ನು ಮಾರ್ಗಮಧ್ಯೆ ನಾಯಕನ ಬೆಂಬಲಿಗರು ಅಡ್ಡಗಟ್ಟಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳಾಧಿಕಾರಿ ಮಾರ್ಗ ಮಧ್ಯೆಯೇ ಚೀರಾಡಿಕೊಂಡು, 112ಕ್ಕೆ ಕರೆ ಮಾಡಿದ್ದಾರೆ. ಇದರಿಂದ ಹಿಂಬಾಲಕರು ಹಿಂದೆ ಸರಿದರು. 

ಅಷ್ಟರಲ್ಲಿ ಸ್ವತಃ ಪ್ರಭಾವಿ ನಾಯಕನೇ ಅಲ್ಲಿಗೆ ಧಾವಿಸಿದ್ದಾರೆ. ಹೊಸೂರು ಕ್ರಾಸ್​ನಲ್ಲಿ ಮಹಿಳಾಧಿಕಾರಿಯನ್ನು ಕಾರನ್ನು ಅಡ್ಡಗಟ್ಟಿದ್ದಾರೆ. ಅವರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ರಾಜಕೀಯ ನಾಯಕನ ಕೊರಳು ಪಟ್ಟಿ ಹಿಡಿದು ಮಹಿಳಾಧಿಕಾರಿ ಎಳೆದಾಡಿದ್ದಾರೆ. ಬಳಿಕ ಅಧಿಕಾರಿಯೊಂದಿಗೆ ಪ್ರಭಾವಿ ರಾಜಕೀಯ ನಾಯಕ ಸರ್ಕಾರಿ ಕಾರಿನಲ್ಲಿ ಕುಳಿತಿದ್ದಾರೆ. ಎಸ್ಪಿ ಕಚೇರಿಗೆ ತೆರಳುವಂತೆ ಚಾಲಕನಿಗೆ ಮಹಿಳಾಧಿಕಾರಿ ಹೇಳುತ್ತಿದ್ದಂತೆ, ಕೊಪ್ಪಳದ ಬಿಇಒ ಕಚೇರಿ ಬಳಿ ಇಲಾಖೆಯ ಕಾರಿನಿಂದ ಕೆಳಗಿಳಿದ ರಾಜಕೀಯ ನಾಯಕ, ತನ್ನ ಕಾರಿನಲ್ಲಿ ತೆರಳಿದ್ದಾರೆ. 

ಬಳಿಕ ಮಹಿಳಾಧಿಕಾರಿ ನೇರವಾಗಿ ದೂರು ನೀಡಲು ರಾತ್ರಿ 10 ಗಂಟೆ ಹೊತ್ತಿಗೆ ಎಸ್ಪಿ ಕಚೇರಿ ತೆರಳಿದ್ದಾರೆ.   ತಡರಾತ್ರಿಯಾದ ಕಾರಣ ಮಹಿಳಾಧಿಕಾರಿ ದೂರು ದಾಖಲಿಸುವ ಲಕೋಟೆಯನ್ನು ಎಸ್ಪಿ ಕಚೇರಿಯಲ್ಲಿ ನೀಡಿದ್ದಾರೆಂದು ಹೇಳಲಾಗಿದೆ. ಮಹಿಳಾಧಿಕಾರಿಯ ಮೇಲೆ ರಾಜಕೀಯ ಪ್ರಭಾವವನ್ನು ಬೀರಿ, ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ, ಲಕೋಟೆಯಲ್ಲಿ ಏನಿದೆ ಮತ್ತು ಎಲ್ಲಿದೆ ಎನ್ನುವ ಅನುಮಾನ ಹಾಗೂ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಅಲ್ಲದೇ ಮಹಿಳಾ ಅಧಿಕಾರಿಯ ಕೂಗಿಗೆ ಬೆಲೆಯಿಲ್ಲದಂತಾಗಿದೆ.

Ads on article

Advertise in articles 1

advertising articles 2

Advertise under the article