ವಿಶ್ವದ ಅತೀ ಸಣ್ಣ ನದಿ ಎಲ್ಲಿದೆ ಗೊತ್ತೇ?, ಏನಿದರ ಹೆಸರು ಗೊತ್ತಾ?

ಬೀಜಿಂಗ್​( ಚೀನಾ): ಕಿರಿದಾದ ಕಾಲುವೆಯಂತೆ ಕಾಣುವ ನದಿ ವಿಶ್ವದ ಅತೀ ಸಣ್ಣ ನದಿಯೆಂದು ಗುರುತಿಸಿಕೊಂಡಿದೆ. ಈ ನದಿಯು ಕೃಷಿ ಭೂಮಿಗಳಲ್ಲಿ ನೀರು ಹಾಯಿಸಲು ನಿರ್ಮಿಸಿರುವ ಸಣ್ಣ ಕಾಲುವೆಯಂತೆ ಕಾಣುತ್ತದೆ. ಆದರೆ ಇದು ವಿಶ್ವದ ಅತ್ಯಂತ ಕಿರಿದಾದ ನದಿಯಾಗಿದೆ.

ಹೌದು, ಹುಲೈ ಎಂದು ಕರೆಯಲ್ಪಡುವ ಈ ನದಿ ಚೀನಾದ ಮಂಗೋಲಿಯಾದಲ್ಲಿದೆ. ಈ ನದಿ ಕೆಲವೇ ಸೆಂ.ಮೀ.ನಷ್ಟು ಅಗಲವಿದೆ. ಹಲವು ಕಡೆಗಳಲ್ಲಿ ಈ ನದಿಯನ್ನು ಹಾರಿ ದಾಟಬಹುದಾದಷ್ಟು ಸಣ್ಣದಾಗಿದೆ ಎಂಬುದು ಇನ್ನೂ ವಿಶೇಷ. 


ಮಂಗೋಲಿಯನ್ ನಲ್ಲಿರುವ ಹುಲೈ ನದಿಯು 17 ಕಿ.ಮೀ.ನಷ್ಟು ಉದ್ದವಿದೆ. ಸರಾಸರಿ ಇದರ ಅಗಲ ಕೇವಲ 15 ಸೆಂ.ಮೀ. ಒಂದೆಡೆ ನದಿಯು ಕೇವಲ 4 ಸೆಂ.ಮೀ. ನಷ್ಟೇ ಅಗಲವಿದೆ. ಸಣ್ಣ ಕಾಲುವೆಯಂತಹ ನದಿ ಇರುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಚೀನಾದ ತಜ್ಞರ ಪ್ರಕಾರ ಕಳೆದ 10,000 ವರ್ಷಗಳಿಂದ ಈ ನದಿಯು ಹರಿಯುತ್ತಿದೆಯಂತೆ. 

ಈ ನದಿಯು ಅಂತರ್ಜಲದಿಂದ ಹುಟ್ಟಿ ಹಿಗ್ಗಿನ್ಸ್ ಹುಲ್ಲುಗಾವಲಿನಲ್ಲಿ ಹರಿದು ದಲೈ ಲಾಮಾ ನೂರ್ ಸರೋವರವನ್ನು ಸೇರುತ್ತದೆ.‌ ಹುಲೈಯನ್ನು ನದಿಯೆಂದು ಪರಿಗಣಿಸುವ ಬಗ್ಗೆ ಹಲವು ಭಿನ್ನಾಭಿಪ್ರಾಯಗಳಿವೆ. ಆದರೂ, ನೀರಿನ ಹರಿವನ್ನು ನದಿಯೆಂದು ಪರಿಗಣಿಸಲು ಅದರ ಗಾತ್ರಕ್ಕೆ ಯಾವುದೇ ಸಂಬಂಧವಿಲ್ಲ ಎಂಬ ವಾದವೂ ಇದೆ. ಹುಲೈಯು ನದಿಯ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಹುಲೈ ವರ್ಷವಿಡೀ ಹರಿಯುತ್ತದೆ ಎಂಬುದು ಗಮನಿಸಬೇಕಾದ ಅಂಶ.

ಹುಲೈ ನದಿಯನ್ನು 'ಬುಕ್​ ಬ್ರಿಡ್ಜ್​​ ರಿವರ್​'(ಪುಸ್ತಕ ಸೇತುವೆ ನದಿ) ಎಂದೂ ಕರೆಯುತ್ತಾರೆ. ಈ ಹೆಸರು ಚೀನೀ ಜಾನಪದದಿಂದ ಬಂದಿದೆ. ಕಥೆಗಳ ಪ್ರಕಾರ, ಹುಡುಗನೋರ್ವನು ಹುಲೈ ನದಿಯನ್ನು ದಾಟುವಾಗ ತನ್ನ ಪುಸ್ತಕವನ್ನು ಬೀಳಿಸಿದನು. ಅದು ಈ ನದಿಯ ಮೇಲೆ ಸೇತುವೆಯಂತೆ ಬಿದ್ದಿತ್ತು. ಈ ಪುಸ್ತಕ ಸೇತುವೆಯ ಮೇಲಿನಿಂದ ಇರುವೆಗಳು ಹಾಗೂ ಇತರ ಸಣ್ಣ ಜೀವಿಗಳು ನದಿಯನ್ನು ದಾಟಿದವು. ಅಂದಿನಿಂದ ಈ ನದಿಗೆ ಪುಸ್ತಕ ಸೇತುವೆ ನದಿ ಎಂದು ಹೆಸರಿಸಲಾಗಿದೆ.