
ನಾನಿಂದು ಜೀವಂತವಾಗಿದ್ದೇನೆ ಅಂದರೆ ಅದಕ್ಕೆ ಈ ಇಬ್ಬರು ಕಾರಣವೆಂದ ನಟಿ ಸಮಂತಾ!
1/23/2022 08:43:00 PM
ಹೈದರಾಬಾದ್: ಕಳೆದ ಅ.2ರಂದು ತಾರಾ ದಂಪತಿ ಸಮಂತಾ ಹಾಗೂ ನಾಗಚೈತನ್ಯ ಅಧಿಕೃತವಾಗಿ ವಿಚ್ಛೇದನೆ ಘೋಷಣೆ ಮಾಡಿದ್ದರು. ಆ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ಇಬ್ಬರೂ ಭಾರೀ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ಸಮಂತಾ ಏನೇ ಮಾಡಿದರೂ ಸುದ್ದಿಯಾಗುತ್ತಿದ್ದಾರೆ.
ಇದೀಗ ಸಮಂತಾ ನೀಡಿರುವ ಹೇಳಿಕೆಯೊಂದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ನಾಗಚೈತನ್ಯ ಹೆಚ್ಚಾಗಿ ಜಾಲತಾಣಗಳಲ್ಲಿ ಸಕ್ರಿಯವಾಗಿರೋಲ್ಲ. ಆದರೆ, ಸಮಂತಾ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ಪ್ರತಿನಿತ್ಯವೂ ಅವರು ಒಂದಲ್ಲ ಒಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರ ಪೋಸ್ಟ್ ಗಳು ಕ್ಷಣ ಮಾತ್ರದಲ್ಲಿಯೇ ವೈರಲ್ ಆಗುತ್ತದೆ.
ಸದ್ಯ ಸಮಂತಾ ಸ್ವಿಟ್ಜರ್ಲೆಂಡ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸಕ್ಕೆ ಸಂಬಂಧಿಸಿರುವ ಫೋಟೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದು, ಎಲ್ಲವೂ ವೈರಲ್ ಆಗುತ್ತಿವೆ. ಇದರ ಮಧ್ಯೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸಮಂತಾ ಶೇರ್ ಮಾಡಿಕೊಂಡಿರುವ ಫೋಟೋ ಹಾಗೂ ಅವರು ಬರೆದಿರುವ ಪದ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇಬ್ಬರು ಸ್ಯಾಮ್ಸಂಗ್ ಸ್ಕೈ ಬೋಧಕರ ಫೋಟೋವನ್ನು ಶೇರ್ ಮಾಡಿಕೊಂಡಿರುವ ನಟಿ ಸಮಂತಾ, ನಾನಿಂದು ಜೀವಂತವಾಗಿದ್ದೇನೆ ಅಂದರೆ ಅದಕ್ಕೆ ಈ ಇಬ್ಬರು ಕಾರಣವೆಂದು ಅವರು ಬರೆದುಕೊಂಡಿದ್ದಾರೆ. ಸಮಂತಾ ಯಾವ ಉದ್ದೇಶದಿಂದ ಈ ಮಾತು ಹೇಳಿದ್ದಾರೋ ಯಾರಿಗೂ ತಿಳಿದಿಲ್ಲ. ಆದರೆ, ಇದನ್ನು ಕೆಲವರು ಮಾತ್ರ ವಿಚ್ಛೇದನಕ್ಕೆ ತಳುಕು ಹಾಕಿದ್ದಾರೆ.