ವಿವಾಹ ವಾರ್ಷಿಕೋತ್ಸವದಂದೇ ಪತ್ನಿಯನ್ನು ಹತ್ಯೆ ಮಾಡಿ ಶೌಚಗೃಹದಲ್ಲಿ ಹೂತಿಟ್ಟ ಪಾಪಿ ಪತಿ...!: ನಾಪತ್ತೆ ನಾಟಕವಾಡಿ ಪೊಲೀಸ್ ದೂರು ದಾಖಲಿಸಿದ

ಚಿತ್ರದುರ್ಗ: ವಿವಾಹ ವಾರ್ಷಿಕೋತ್ಸವದ ದಿನದಂದೇ ಪಾಪಿ ಪತಿಯೋರ್ವನು ಪತ್ನಿಯನ್ನು ಹತ್ಯೆ ಮಾಡಿ ಶೌಚಗೃಹದಲ್ಲಿ ಹೂತಿಟ್ಟು ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿದ್ದಾಳೆಂದು ನಾಟಕವಾಡಿ ದೂರು ನೀಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.

ನಾರಪ್ಪ ಎಂಬಾತನೇ ಪತ್ನಿ ಸುಮಾ(30)ರನ್ನು ಕೊಲೆಗೈದಿರುವಾತ. 

ನಾರಪ್ಪ ಪತ್ನಿ ಸುಮಾರನ್ನು ಕೊಲೆಗೈದು ಮನೆಯ ಶೌಚಗೃಹದಲ್ಲಿಯೇ ಹೂತಿಟ್ಟ ಬಳಿಕ ಪತ್ನಿ ನಾಪತ್ತೆಯಾಗಿರುವ ದೂರು ದಾಖಲಿಸಿದ್ದಾನೆ. ನಾರಪ್ಪ ನೀಡಿರುವ ದೂರಿನನ್ವಯ ಪೊಲೀಸರು ಆಕೆಯನ್ನು ಹುಡುಕಲು ಆರಂಭಿಸಿದ್ದಾರೆ. ಆದರೆ ತನಿಖೆ ನಡೆಸಿರುವ ಪೊಲೀಸರಿಗೆ ಸುಮಾ ಮೃತದೇಹವಾಗಿ ಪತ್ತೆಯಾಗಿದ್ದಾಳೆ. ಆ ಬಳಿಕ ನಾಪತ್ತೆ ದೂರು ದಾಖಲಿಸಿದ ಪತಿಯೇ ಕೊಲೆ ಆರೋಪಿ ಎಂದು ತಿಳಿದು ಪೊಲೀಸರು ಶಾಕ್​ ಗೆ ಒಳಗಾಗಿದ್ದಾರೆ.

ಸುಮಾರನ್ನು ಆಕೆಯ ತವರು ಮನೆಯವರು ನಾರಪ್ಪನೊಂದಿಗೆ ಮದುವೆ ಮಾಡಿದ್ದಾರೆ. ದಂಪತಿಗೆ 4 ವರ್ಷದ ಗಂಡು ಮಗುವೂ ಇದೆ. ಕಳೆದ ಡಿಸೆಂಬರ್ 25‌ಕ್ಕೆಅವರಿಬ್ಬರ 6ನೇ ವಿವಾಹ ವಾರ್ಷಿಕೋತ್ಸವವಿತ್ತು. ಅದೇ ದಿನವೇ ನಾರಪ್ಪ ಪತ್ನಿಯನ್ನು ಕೊಲೆ ಮಾಡಿದ್ದಾನೆ.‌ ಬಳಿಕ ಆಕೆಯ ಮೃತದೇಹವನ್ನು ಮನೆಯ ಶೌಚಗೃಹದಲ್ಲಿ ಹೂತಿಟ್ಟು ಸಿಮೆಂಟ್‌ನಿಂದ ಪ್ಲಾಸ್ಟಿಂಗ್ ಮಾಡಿದ್ದಾನೆ.

ಬಳಿಕ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿದ್ದಾಳೆ ಹುಡುಕಿಕೊಡಿ ಎಂದು ದೂರು ನೀಡಿದ್ದಾನೆ. ಪೊಲೀಸರು ಕೋಣನೂರು ಗ್ರಾಮ, ಸಂಬಂಧಿಕರ ಮನೆ, ತವರು ಮನೆ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಆಕೆ ಎಲ್ಲೂ ಪತ್ತೆಯಾಗಿರಲಿಲ್ಲ.

ಆದರೆ ನಾರಪ್ಪನ ನಾಟಕ ನೋಡಿ‌ ಪೊಲೀಸರಿಗೆ ಆತನ ಮೇಲೆಯೇ ಅನುಮಾನ ಕಾಡಲಾರಂಭಿಸಿದೆ. ಆದ್ದರಿಂದ ನಾರಪ್ಪನ‌ ಮನೆಯನ್ನೇ ಪರಿಶೀಲನೆ ನಡೆಸಿದಾಗ ಆತ ಶೌಚಗೃಹದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. 

ವಿಚಾರ ತಿಳಿಯುತ್ತಿದ್ದಂತೆ ನಾರಪ್ಪ ಪರಾರಿಯಾಗಿದ್ದಾನೆ. ಮನೆಯಲ್ಲಿಯೇ ಸುಮಾ ಮೃತದೇಹವನ್ನು ಹೂತಿಟ್ಟಿರೋ‌ ವಿಚಾರ ತಿಳಿದು ಇಡೀ ಗ್ರಾಮವೇ ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಎಸ್ಪಿ‌ ಜಿ. ರಾಧಿಕಾ, ಎಸಿ, ತಹಶೀಲ್ದಾರ್, ವಿಧಿ ವಿಜ್ಞಾನ ವಿಭಾಗದ ತಜ್ಞರು ಭೇಟಿ‌ ನೀಡಿ ಪರಿಶೀಲಿಸಿದ್ದಾರೆ.