-->

Mangaluru: ಹಣಕ್ಕಾಗಿ ಕೂಲಿ ಕಾರ್ಮಿಕನ‌ ಕೊಲೆ; ಈರ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ

Mangaluru: ಹಣಕ್ಕಾಗಿ ಕೂಲಿ ಕಾರ್ಮಿಕನ‌ ಕೊಲೆ; ಈರ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ

ಮಂಗಳೂರು: ಹಣಕ್ಕಾಗಿ ಕೂಲಿ ಕಾರ್ಮಿಕನ ಕೊಲೆಗೈದು ದೇಹವನ್ನು ತುಂಡು ತುಂಡು ಮಾಡಿ ತೋಡಿಗೆ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲಿನ ಕೊಲೆ ಆರೋಪವು ಸಾಬೀತುಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ‌.

ವಲಸೆ ಕಾರ್ಮಿಕರು ಬಾಗಲಕೋಟೆ ತಳಿಕೇರಿ ಗ್ರಾಮ ನಿವಾಸಿ ಗೌಡಪ್ಪ ಗೌಡ ಸಣ್ಣಗೌಡ್ರು ಹಾಗೂ ಕೊಪ್ಪಳ ಜಿಲ್ಲೆಯ ಕಬ್ಬರಗಿ ಗ್ರಾಮ ನಿವಾಸಿ ಹುಲ್ಲಪ್ಪ ಬಸಪ್ಪ ಸೂಡಿ ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಮರಿಯಪ್ಪ ಎಂಬಾತ ಹತ್ಯೆಯಾದ ದುರ್ದೈವಿ.

ಮೂರು ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ ಎಂಬಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು. ಕೊಲೆ ಆರೋಪಿ ಗೌಡಪ್ಪ ಗೌಡ ಮತ್ತು ಕೊಲೆಯಾದ ದುರ್ದೈವಿ ಮರಿಯಪ್ಪ ಸುರತ್ಕಲ್ ಕಾನದ ಎಸ್ಟೇಟ್‌ ವೊಂದರ ಮನೆಯಲ್ಲಿ ವಾಸವಾಗಿದ್ದರು. ಮರಿಯಪ್ಪ ತನ್ನ ಉಳಿತಾಯದ ಹಣದಲ್ಲಿ 10 ಸಾವಿರ ರೂ.ವನ್ನು ಎತ್ತಿಡಲು ಗೌಡಪ್ಪ ಗೌಡನಿಗೆ ನೀಡಿದ್ದನು. ಕೆಲ ದಿನಗಳ ಬಳಿಕ ಮರಿಯಪ್ಪ ತಾನು ಊರಿನಲ್ಲಿ ಮನೆ ಕಟ್ಟಿಸುತ್ತಿದ್ದು, ಹಣವನ್ನು ಮರಳಿಸಬೇಕೆಂದು ತಿಳಿಸಿದ್ದನು. 

ಇದರಿಂದ ಕ್ರುದ್ಧನಾದ ಗೌಡಪ್ಪ ಗೌಡ ತನ್ನ ಪರಿಚಿತ ಹುಲ್ಲಪ್ಪ ಬಸಪ್ಪ ಸೂಡಿನನ್ನು ಸೇರಿಸಿಕೊಂಡು ಮರಿಯಪ್ಪನ ಕೊಲೆಗೈಯ್ಯಲು ಸಂಚು ರೂಪಿಸಿದ್ದನು. 2018ರ ಮೇ 31ರಂದು ರಾತ್ರಿ ಮರಿಯಪ್ಪ ಮತ್ತೆ ತನ್ನ ಹಣ ವಾಪಸ್ ನೀಡುವಂತೆ ಒತ್ತಾಯ ಮಾಡಿದ್ದಾನೆ. ಆಗ ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದಲೇ ತಂದಿದ್ದ ಮಚ್ಚಿನಿಂದ ಮರಿಯಪ್ಪನ ತಲೆಗೆ ಹೊಡೆದಿದ್ದಾರೆ‌. ಇದರಿಂದ ಆತ ಮೃತಪಟ್ಟಿದ್ದಾನೆ. ಬಳಿಕ ಚೂರಿಯಿಂದ ಮೃತದೇಹವನ್ನು ತುಂಡರಿಸಿ, ಪಂಚೆಯನ್ನು ಕಟ್ಟಿ ಮನೆಯ ಪಕ್ಕದಲ್ಲಿ ಮಳೆ ನೀರು ಹರಿಯುವ ತೋಡಿಗೆ ಬಿಸಾಡಿದ್ದಾರೆ. 

ಆದರೆ ಸುರತ್ಕಲ್ ಚೊಕ್ಕಬೆಟ್ಟುವಿನ ಬಳಿ ಸೇತುವೆ ಕಾಮಗಾರಿ ಸಂದರ್ಭ ಕೆಟ್ಟು ಹೋಗಿದ್ದ ಪಂಪ್ ಅನ್ನು ದುರಸ್ತಿ ಮಾಡಲು ಗುತ್ತಿಗೆದಾರರು 2018ರ ಜೂ.2ರಂದು ಬಂದಿದ್ದಾಗ ಮಳೆನೀರು ಹರಿಯುವ ತೋಡಿನಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ತಕ್ಷಣ ಅವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದ ದಿನದ ದೃಶ್ಯಗಳನ್ನು ಪಕ್ಕದ ಫ್ಲಾಟ್‌ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಿಂದ ಪತ್ತೆಹಚ್ಚಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ಈ ಬಗ್ಗೆ ಪೊಲೀಸ್ ನಿರೀಕ್ಷಕ ರಾಮಕೃಷ್ಣ ಕೆ.ಜಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆಯ ಪರವಾಗಿ 21 ಮಂದಿ ಸಾಕ್ಷಿದಾರರನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು. ಆರೋಪಿಗಳ ಮೇಲಿನ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಕೊಲೆ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ಹಾಗೂ ತಲಾ 5,000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ ಹೆಚ್ಚುವರಿ 2 ತಿಂಗಳು ಜೈಲು ಶಿಕ್ಷೆ. ಸಾಕ್ಷಿನಾಶಕ್ಕೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 2,000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ತೀರ್ಪು ನೀಡಿದ್ದಾರೆ. 

ದಂಡದ ಹಣದಲ್ಲಿ 10,000 ರೂ.ವನ್ನು ಕೊಲೆಯಾದ ಮರಿಯಪ್ನ ಪತ್ನಿಗೆ ನೀಡಲು ಹಾಗೂ ಪತ್ನಿ, ಮಕ್ಕಳಿಗೆ ಸೂಕ್ತ ಪರಿಹಾರ ನೀಡಲು ದ.ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿ ಡಿ.31ರಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದರು.  

Ads on article

Advertise in articles 1

advertising articles 2

Advertise under the article