ಮಿಸ್ ಕಾಲ್ ನಲ್ಲಿ ಆರಂಭವಾಯಿತು ಇವರಿಬ್ಬರ ಪ್ರೀತಿ: ಪ್ರಿಯಕರ ಅಂಧನೆಂದು ತಿಳಿದು ಪ್ರೇಯಸಿ ಮಾಡಿದ್ದೇನು ತಿಳಿದ್ರೆ ಅಚ್ಚರಿ ಪಡ್ತೀರ

ಬಲಗಿರ್​: ನೀವು ಬಹಳಷ್ಟು ಪ್ರೇಮಿಗಳನ್ನು ನೋಡುತ್ತಲೇ ಇರುತ್ತೇವೆ. ಅವುಗಳಲ್ಲಿ ಕೆಲವರ ಪ್ರೀತಿ ಯಶಸ್ಸಿನ ಹಾದಿ ಹಿಡಿದರೆ, ಇನ್ನು ಕೆಲವ ಪ್ರೀತಿ ವಿವಿಧ ಕಾರಣಗಳಿಂದ ವಿಫಲ ಹಾದಿಯನ್ನು ಹಿಡಿಯುತ್ತವೆ. ಆದರೆ, ಇದೀಗ ನಾವು ಹೇಳಲು ಹೊರಟಿರುವ ಈ ಲವ್​ ಸ್ಟೋರಿ ಬಹಳ ವಿಭಿನ್ನವಾಗಿದ್ದು, ಪ್ರೀತಿ ಕುರುಡು ಎಂಬ ಮಾತಿಗೆ ನಿಜವಾದ ಅರ್ಥವನ್ನು ನೀಡುತ್ತದೆ. 

ಒಡಿಶಾದ ಬಲಗಿರ್​ ಜಿಲ್ಲೆಯ ಮಂದಮಹುಲ್​ ಗ್ರಾಮದ ದಿಲೀಪ್​ ತಂಡಿ ಹಾಗೂ ಅದೇ ಜಿಲ್ಲೆಯ ಬುರುಡಾ ಗ್ರಾಮದ ಚಾಂದಿನಿ ಬಾಘ್​ ಎಂಬ ಜೋಡಿಯ ಮಧ್ಯೆ ಮಿಸ್​ ಕಾಲ್​ ಮೂಲಕ ಪ್ರೀತಿ​ ಶುರುವಾಗಿದೆ. ಆದರೆ, ದಿಲೀಪ್​ ಹುಟ್ಟು ಕುರುಡನಾದರೂ ಚಾಂದಿನಿ ಆತನನ್ನು ಮದುವೆಯಾಗಲು ಸಮ್ಮತಿ ಸೂಚಿಸುವ ಮೂಲಕ ನಿಜವಾದ ಪ್ರೀತಿ ಏನೆಂಬುದನ್ನು ನಿರೂಪಿಸಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ದೈಹಿಕ ಸಾಮರ್ಥ್ಯ, ಹಣ, ಸಂಪತ್ತು, ಸಮಾಜದಲ್ಲಿ ಸ್ಥಾನಮಾನವನ್ನು ನೋಡಿ ಪ್ರೀತಿ ಮಾಡುವವರ ಮಧ್ಯೆ ಚಾಂದಿನಿ ತಾನು ಪ್ರೀತಿಸುವ ಯುವಕ, ಅಂಧ ಎಂದು ಗೊತ್ತಿದ್ದರೂ ಆತನ ಜತೆಗೆ ಮದುವೆಗೆ ಒಪ್ಪಿಕೊಂಡಿದ್ದಾರೆ. ಚಾಂದಿನಿ ಹಾಗೂ ದಿಲೀಪ್ ನಡುವಿನ ಪ್ರೀತಿಯನ್ನು ಕಂಡು ಮೂಕವಿಸ್ಮಿತರಾಗಿರುವ​ ಎರಡು ಕುಟುಂಬದವರು ಇಬ್ಬರ ಮದುವೆಗೆ ಹಸಿರು ನಿಶಾನೆ ಸಹ ತೋರಿದ್ದಾರೆ. 

ಇದೀಗ ಮದುವೆ ಮಾಡಿಕೊಳ್ಳುವ ಮೂಲಕ ಇಬ್ಬರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿದ್ದಾರೆ. ಅಂಧ ಎಂದು ಗೊತ್ತಿದ್ದರೂ ಆತನನ್ನು ಒಪ್ಪಿಕೊಂಡಿರುವ ಚಾಂದಿನಿ ನಿರ್ಧಾರಕ್ಕೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.