ಬಂಡಾ (ಉತ್ತರ ಪ್ರದೇಶ): ಇದೀಗ ಎಲ್ಲೆಡೆಯೂ ಜಾತ್ರೆಯ ಸಂಭ್ರಮ. ಒಂದೊಂದು ಜಾತ್ರೆಯದ್ದು ಒಂದೊಂದು ವಿಶೇಷತೆ. ಅಂಥಹದ್ದೇ ಒಂದು ವಿಶೇಷ ಜಾತ್ರೆಯೀಗ ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ. ಅಂದಹಾಗೆ ಇದು ಪ್ರೇಮಿಗಳ ಜಾತ್ರೆ.
ಮಕರ ಸಂಕ್ರಾಂತಿಯ ಎರಡು ದಿನಗಳ ಕಾಲಗಳ ಈ ವಿಶೇಷ ಜಾತ್ರೆ ನಡೆಯುತ್ತದೆ. ಉತ್ತರ ಪ್ರದೇಶದ ಬಂಡಾ ನಗರದ ಕೆನ್ ನದಿಯ ದಡದಲ್ಲಿರುವ ಭೂರಗಢ್ ಕೋಟೆಯಲ್ಲಿ ಈ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಈ ಕೋಟೆಯಲ್ಲಿ ನಟಾಬಲಿ ಬಾಬಾ ದೇವಾಲಯವಿದೆ. ಈತ ಪ್ರೇಮಿಗಳ ಕಾಮನೆಗಳನ್ನು ಈಡೇರಿಸುವ ದೇವತೆ ಎಂಬುದು ನಂಬಿಕೆ.
ಆದ್ದರಿಂದ ಬಹಳ ದೂರ ದೂರದೂರುಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರಂತೆ. ಅದರಲ್ಲೂ ವಿಶೇಷವಾಗಿ ಪ್ರೇಮಿಗಳು ನಟಾಬಲಿ ಬಾಬಾಗೆ ಪೂಜೆ ಸಲ್ಲಿಸುತ್ತಾರೆ. ಭೂರಗಢ ಕೋಟೆಯಡಿಯಲ್ಲಿ ನಿರ್ಮಿಸಲಾದ ನಟಾಬಲಿ ಬಾಬಾನ ವಿಶೇಷವೆಂದರೆ ಇಲ್ಲಿ ಯಾವುದೇ ಹರಕೆ ಹೊತ್ತರೂ ಈಡೇರುತ್ತೆಯಂತೆ.
ಪ್ರೇಮಿಗಳ ಬದುಕಿನಲ್ಲಿ ಏನಾದರೂ ಸಮಸ್ಯೆಗಳೆದುರಾದರೆ ಈ ಜಾತ್ರೆಯ ಸಂದರ್ಭದಲ್ಲಿ ಹರಕೆ ಹೊತ್ತರೆ ಸಾಕು, ಅವರ ಅಪೇಕ್ಷೆಗಳೆಲ್ಲಾ ಈಡೇರುತ್ತದೆ. ಪ್ರೀತಿಯಲ್ಲಿ ಯಶಸ್ಸು ಸಿಗುತ್ತದೆ ಎಂಬ ಬಲವಾದ ನಂಬಿಕೆ ಇರುವ ಕಾರಣ, ಪ್ರೇಮಿಗಳು ಜಾತ್ರೆಯ ದಿನದಂದು ಇಲ್ಲಿಗೆ ಭೇಟಿ ನೀಡಿಯೇ ನೀಡುತ್ತಾರೆ.
ಅಷ್ಟಕ್ಕೂ ಈ ಜಾತ್ರೆ ಇಂದು ಮೊನ್ನೆಯದ್ದಲ್ಲ. ಈ ಜಾತ್ರೆಗೆ ಸುಮಾರು ಆರು ಶತಮಾನಗಳ ಇತಿಹಾಸವಿದೆ. ಇಲ್ಲಿಯ ಮಹೊಬಾ ಜಿಲ್ಲೆಯ ಸುಗೀರಾ ಎಂಬ ಊರಿನ ನಿವಾಸಿಯಾದ ಅರ್ಜಿನ್ ಸಿಂಗ್ ಭುರಗಢ ಕೋಟೆಯ ರಾಜನಾಗಿದ್ದ. ಬಿರಾನ್ ಎಂಬ ನಾಟ್ ಜಾತಿಯ 21 ವರ್ಷದ ಯುವಕ ಈ ಕೋಟೆಯಲ್ಲಿ ಸೇವಕನಾಗಿದ್ದ. ಈ ಯುವಕನಿಗೆ ತಂತ್ರ – ಮಂತ್ರಗಳ ಬಗ್ಗೆ ಸಾಕಷ್ಟು ಅರಿವಿತ್ತು. ಈತ ರಾಜ ಅರ್ಜಿನ್ ಸಿಂಗ್‌ನ ಪುತ್ರಿಯನ್ನು ಪ್ರೀತಿಸಲಾರಂಭಿಸುತ್ತಾನೆ.
ಆತನನ್ನೇ ತಾನು ವಿವಾಹವಾಗುವುದಾಗಿ ತಂದೆಗೆ ರಾಜನ ಮಗಳು ಹೇಳುತ್ತಾಳೆ. ಆದರೆ ರಾಜಾ ಅರ್ಜಿನ್ ಸಿಂಗ್ ಒಂದು ಷರತ್ತು ಹಾಕುತ್ತಾನೆ. ಅದೇನೆಂದರೆ ಬಂಬೇಶ್ವರ ಪರ್ವತದಿಂದ ನದಿಯ ಸಮೀಪ ಇರುವ ಕೋಟೆಗೆ ನೂಲಿನ ದಾರದ ಹಗ್ಗವನ್ನು ಹತ್ತಿ ಕೋಟೆಗೆ ಬಂದರೆ ಪುತ್ರಿಯನ್ನು ವಿವಾಹವಾಗಬಹುದು ಎಂದು ಹೇಳುತ್ತಾನೆ. ಅದಕ್ಕೆ ಒಪ್ಪಿದ ಬಿರಾನ್ ಪರ್ವತದಿಂದ ಹತ್ತಿಯ ಹಗ್ಗದ ಸಹಾಯದಿಂದ ನದಿಯನ್ನು ದಾಟಿ ಕೋಟೆ ತಲುಪಲು ಇನ್ನೇನು ಯಶಸ್ವಿಯಾಗುತ್ತಾನೆ ಎನ್ನುವಾಲೇ ಕುತಂತ್ರದಿಂದ ರಾಜ ಹಗ್ಗವನ್ನು ಕತ್ತರಿಸುತ್ತಾನೆ. ಬಿರಾನ್ ಬಿದ್ದು ಸಾಯುತ್ತಾನೆ.
ಇದನ್ನು ಅರಗಿಸಿಕೊಳ್ಳಲಾಗದ ರಾಜನ ಪುತ್ರಿ ಕೋಟೆಯಿಂದ ಹಾರಿ ಪ್ರಾಣ ಬಿಡುತ್ತಾಳೆ. ಇದರಿಂದ ಮನನೊಂದ ರಾಜ ಈ ಪ್ರೇಮಿಗಳಿಗಾಗಿ ಒಟ್ಟಿಗೇ ಸಮಾಧಿ ನಿರ್ಮಿಸುತ್ತಾನೆ. ಅಲ್ಲಿಂದ ಪ್ರತಿ ವರ್ಷ ಸಂಕ್ರಾಂತಿಯ ಆಸುಪಾಸು ಇಲ್ಲಿ ಜಾತ್ರೆ ನಡೆದು ಪ್ರೇಮಿಗಳ ಬಯಕೆ ಈಡೇರಿಸಲಾಗುತ್ತದೆ ಎಂಬ ನಂಬಿಕೆ ಇದೆ.