-->
ಅಕ್ರಮ ಸಂಬಂಧ ಮುಂದುವರೆಸಲು ನಿರಾಕರಣೆ: ಪ್ರೇಯಸಿ ಅಣ್ಣನ ಅಪಹರಣ

ಅಕ್ರಮ ಸಂಬಂಧ ಮುಂದುವರೆಸಲು ನಿರಾಕರಣೆ: ಪ್ರೇಯಸಿ ಅಣ್ಣನ ಅಪಹರಣ

ಬೆಂಗಳೂರು: ಅಕ್ರಮ ಸಂಬಂಧದ ಮುಂದುವರಿಕೆಗೆ ನಿರಾಕರಣೆ ಮಾಡಿರುವ ಮಹಿಳೆಯ ಸಹೋದರನನ್ನು ಅಪಹರಿಸಿದ ಭಗ್ನ ಪ್ರೇಮಿ ಸೇರಿ ಆರು ಮಂದಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ರಾಜಗೋಪಾಲನಗರದ ಶ್ರೀನಿವಾಸ್‌ (32) ಹಾಗೂ ಆತನ ಸಹಚರರುಗಳಾದ ಪ್ರತಾಪ್‌ (28),ಆಕಾಶ್‌ (31), ಹುಚ್ಚೇಗೌಡ (34), ಶಿವ (31), ಗಂಗಾಧರ್‌ (34) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿರುವ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶ್ರೀನಿವಾಸ್‌ ಫೈನಾನ್ಸ್‌ ಸಂಸ್ಥೆಯೊಂದರಲ್ಲಿ ವಾಹನ ಜಪ್ತಿಮಾಡುವ ಕೆಲಸ ನಿರ್ವಹಿಸುತ್ತಿದ್ದ. ಈತನಿಗೆ ಮದುವೆಯಾಗಿದ್ದು, ಪತ್ನಿ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ.‌ ಈ ನಡುವೆ ಈತ ಮನೆ ಸಮೀಪದ ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದು, ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮೂರು ತಿಂಗಳ ಹಿಂದೆ ಈಕೆಯು ಕೂಡ ಪತಿ ಹಾಗೂ ಮಕ್ಕಳನ್ನು ತೊರೆದು ಶ್ರೀನಿವಾಸ್‌ನೊಂದಿಗೆ ಲಿವಿಂಗ್‌ ಟುಗೆದರ್‌ ಮಾದರಿಯಲ್ಲಿ ವಾಸಿಸುತ್ತಿದ್ದಳು. ಜ.17ರಂದು ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಮನಸ್ತಾಪ ಮೂಡಿತ್ತು. ಇದರಿಂದ ಮನನೊಂದ ಮಹಿಳೆಯು ಶ್ರೀನಿವಾಸ್‌ನಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ಪೊಲೀಸರು ಹೇಳಿದರು.

ಆದರೆ, ಶ್ರೀನಿವಾಸ್‌ ಗೆ ಪ್ರೇಯಸಿಯನ್ನು ಬಿಟ್ಟಿರಲಾಗದೆ ಪದೇ ಪದೇ ಕರೆ ಮಾಡಿ ಮತ್ತೆ ತನ್ನೊಂದಿಗೆ ಜೀವನ ನಡೆಸುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ಆಕೆ ನಿರಾಕರಿಸಿದ್ದಳು. ಅದರಿಂದ ಆಕ್ರೋಶಗೊಂಡ ಶ್ರೀನಿವಾಸ್‌, ತನ್ನ ಸಹಚರರ ಜತೆಗೆ ಸೇರಿ ಆಕೆಯ ಸಹೊದರ ವೆಂಕಟೇಶ್‌ನನ್ನು ಅಪಹರಣ ಮಾಡಲು ಸಂಚು ರೂಪಿಸಿದ್ದ. ಅದರಂತೆ ಜ.20ರಂದು ರಾತ್ರಿ 9 ಗಂಟೆಗೆ ವೆಂಕಟೇಶ್‌ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಸಂದರ್ಭ ಆತನನ್ನು ಭೇಟಿಯಾದ ಶ್ರೀನಿವಾಸ್‌, “ನಿನ್ನ ಬಳಿ ಸ್ವಲ್ಪ ಮಾತನಾಡಬೇಕು’ ಎಂದು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ. ಬಳಿಕ ಹೊಸಕೋಟೆ-ಕೋಲಾರಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾನೆ.

ಬಳಿಕ ಪ್ರೇಯಸಿಗೆ ಕರೆ ಮಾಡಿ, “ನೀನು ನನ್ನೊಂದಿಗೆ ಬರಲು ಒಪ್ಪದಿದ್ದರೆ, ನಿನ್ನ ಅಣ್ಣ ವೆಂಕಟೇಶ್‌ನನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.  ಆತಂಕಗೊಂಡ ಮಹಿಳೆ, ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ.

ಪೊಲೀಸರು, ಶ್ರೀನಿವಾಸ್‌ ಮಹಿಳೆಗೆ ಕರೆ ಮಾಡಿದ ಪ್ರದೇಶವನ್ನು ಪರಿಶೀಲಿಸಿದಾಗ ಆತ ಹೊಸಕೋಟೆಯಲ್ಲಿರುವುದು ಪತ್ತೆಯಾಗಿದೆ. ತಕ್ಷಣ ಹೊಸಕೋಟೆಗೆ  ತೆರಳಿದ ಪೊಲೀಸರ ತಂಡ ಆರೋಪಿ ಹಾಗೂ ಆತನ ಸಹಚರರನ್ನು ಬಂಧಿಸಿ, ವೆಂಕಟೇಶ್‌ನನ್ನು ರಕ್ಷಣೆ ಮಾಡಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

Ads on article

Advertise in articles 1

advertising articles 2

Advertise under the article