-->
ಖ್ಯಾತ ನಟಿಯ ಲೈಂಗಿಕ ದೌರ್ಜನ್ಯ ಪ್ರಕರಣ: ಕೇರಳ ಹೈಕೋರ್ಟ್ ನಿಂದ ನಟ ದಿಲೀಪ್ ಗೆ ಶಾಕ್

ಖ್ಯಾತ ನಟಿಯ ಲೈಂಗಿಕ ದೌರ್ಜನ್ಯ ಪ್ರಕರಣ: ಕೇರಳ ಹೈಕೋರ್ಟ್ ನಿಂದ ನಟ ದಿಲೀಪ್ ಗೆ ಶಾಕ್

ತಿರುವನಂತಪುರಂ: ಖ್ಯಾತ ನಟಿಯೋರ್ವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಹಳೆಯ ಫೋನ್​ಗಳನ್ನು ಸೋಮವಾರ ಬೆಳಗ್ಗೆ 10.15ರೊಳಗೆ ರಿಜಿಸ್ಟ್ರಾರ್​ ಮುಂದೆ ಸಲ್ಲಿಸುವಂತೆ ಪ್ರಕರಣದ ಪ್ರಮುಖ ಆರೋಪಿ ಮಲಯಾಳಂ ನಟ ದಿಲೀಪ್​ಗೆ ಕೇರಳ ಹೈಕೋರ್ಟ್​ ಆದೇಶಿಸಿದೆ. ಇಲ್ಲಿಯವರೆಗೆ ಹಳೆಯ ಫೋನ್​ ಅನ್ನು ಕೊಡದೆ ಸತಾಯಿಸುತ್ತಿದ್ದ ನಟ ದಿಲೀಪ್​ ಗೆ ಇದೀಗ ಕೋರ್ಟ್​ ಇದೀಗ ಶಾಕ್​ ನೀಡಿದೆ. 

ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್​ ಅಧಿಕಾರಿಗಳನ್ನು ಹತ್ಯೆಗೈಯಲು ಸಂಚು ರೂಪಿಸಿರುವ ಅರೋಪವೂ ನಟ ದಿಲೀಪ್​ ಸೇರಿದಂತೆ ಇತರ ಐವರು ಆರೋಪಿಗಳ ಮೇಲಿದೆ. ಈ ಕುರಿತು ಹೊಸ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಆರೋಪಿ ದಿಲೀಪ್ ಸೇರಿದಂತೆ ಎಲ್ಲ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಅದಕ್ಕಾಗಿ ಹಳೆಯ ಫೋನ್​ಗಳನ್ನು ಸಲ್ಲಿಸುವಂತೆ ಕೇಳಿಕೊಂಡಿದ್ದರು. ಆದರೆ, ಆರೋಪಿಗಳು ಹಳೆಯ ಫೋನ್ ಗಳನ್ನು ನೀಡುವುದಿಲ್ಲ ಎಂದು ಕೋರ್ಟ್​ ಮೆಟ್ಟಿಲೇರಿದ್ದರು. ಅಲ್ಲದೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನನ್ನೂ ಕೋರಿದ್ದಾರೆ. ಜಾಮೀನು ಸಂಬಂಧ ಹೈಕೋರ್ಟ್​ ವಿಚಾರಣೆ ನಡೆಸಿದೆ. 

ಈ ವೇಳೆ ತನಿಖಾಧಿಕಾರಿಗಳ ಪರ ವಕೀಲರು ನಟ ದಿಲೀಪ್​ ಅವರ ಹಳೆಯ ಫೋನ್​ಗಳನ್ನು ಹಸ್ತಾಂತರಿಸಲು ಒತ್ತಾಯಿಸಿದ್ದರು. ಆದರೆ, ದಿಲೀಪ್​ ಹಳೆಯ ಫೋನ್ ಅನ್ನು ಹಸ್ತಾಂತರಿಸಲು ನಿರಾಕರಿಸಿದ್ದರು. ಅಲ್ಲದೆ, ಒಂದು ವೇಳೆ ಆ ಫೋನ್ ಹಸ್ತಾಂತರ ಮಾಡಿದರೆ, ಅದರಲ್ಲಿ ಏನಿದೆಯೋ ಅದನ್ನು ಇಟ್ಟುಕೊಂಡು ಸುಳ್ಳು ಕತೆಯನ್ನು ಸೃಷ್ಟಿ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ. ಇದಲ್ಲದೆ, ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತನಿಖಾಧಿಕಾರಿ ಬೈಜು ಪೌಲೋಸ್ ಮತ್ತು ಬಾಲಚಂದ್ರಕುಮಾರ್ ಅವರ ಫೋನ್‌ಗಳನ್ನು ಪರಿಶೀಲಿಸುವಂತೆ ದಿಲೀಪ್​ ನ್ಯಾಯಾಲಯವನ್ನು ಒತ್ತಾಯಿಸಿದರು. 

ಈಗಾಗಲೇ ನಟ ದಿಲೀಪ್​ ವಿಧಿವಿಜ್ಞಾನ ಪರೀಕ್ಷೆಗಾಗಿ ಹೊಸ ಫೋನ್​ನನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ತನಿಖಾಧಿಕಾರಿಗಳ ಪ್ರಕಾರ ಹಳೆಯ ಫೋನ್​ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ತನಿಖಾಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳಿವೆ ಎಂದು ಹೇಳಲಾಗಿದೆ. 

ತನಿಖಾಧಿಕಾರಿಗಳ ಹತ್ಯೆಗೆ ಸಂಚು ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಬೆನ್ನಲ್ಲೇ ದಿಲೀಪ್​ ಸೇರಿದಂತೆ ಇತರೆ ಆರೋಪಿಗಳು ತಮ್ಮ ತಮ್ಮ ಫೋನ್​ಗಳನ್ನು ಬದಲಾಯಿಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಹಳೆಯ ಫೋನ್​ ಗಳ ಅಗತ್ಯವನ್ನು ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸೋಮವಾರ ಬೆಳಗ್ಗೆ 10.15ರ ಒಳಗೆ ಫೋನ್​ಗಳನ್ನು ಸಲ್ಲಿಸುವಂತೆ ಆದೇಶಿಸಿದ್ದು, ಅಲ್ಲಿಯವರೆಗೂ ದಿಲೀಪ್​ ಅವರನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಿ, ವಿಚಾರಣೆ ಮುಂದೂಡಿದೆ. 

Ads on article

Advertise in articles 1

advertising articles 2

Advertise under the article