ಗ್ವಾಲಿಯರ್(ಮಧ್ಯಪ್ರದೇಶ): ಸ್ನೇಹಿತನೇ ತನ್ನ ಸಹಚರರೊಂದಿಗೆ ಸೇರಿ ಅಪ್ರಾಪ್ತೆಯನ್ನು ಅಪಹರಿಸಿ ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿ ಕೃತ್ಯವನ್ನು ಮುಚ್ಚಿ ಹಾಕಲು ಆಕೆಯನ್ನು ಕೊಲೆಗೈದು, ಮೃತದೇಹವನ್ನು ಚಂಬಲ್ ನದಿಗೆಸೆದ ಹೇಯ ಕೃತ್ಯವೊಂದು ನಡೆದಿದೆ.
ವಿದ್ಯಾರ್ಥಿನಿಯೋರ್ವಳನ್ನು ಭೇಟಿಯಾಗುವ ನೆಪದಲ್ಲಿ ಸ್ನೇಹಿತನೋರ್ವ ಕರೆ ಮಾಡಿದ್ದಾನೆ. ಈ ವೇಳೆ ಆಕೆ ಸ್ನೇಹಿತ ಹೇಳಿರುವ ಜಾಗಕ್ಕೆ ಬಂದಿದ್ದಾಳೆ. ಆಗ ಆತ ಆಕೆಯನ್ನು ತನ್ನ ಸಹಚರರ ಸಹಾಯದಿಂದ ಅಪಹರಿಸಿದ್ದಾನೆ. ಇದಾದ ಬಳಿಕ ಆಕೆಯನ್ನು ಎರಡು ದಿನಗಳ ಕಾಲ ಲಾರಿಯಲ್ಲಿ ಬಚ್ಚಿಟ್ಟು, ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣ ಮುಚ್ಚಿ ಹಾಕಲು ಆಕೆಯನ್ನು ಕೊಲೆಗೈದು, ಮೃತದೇಹವನ್ನು ಚಂಬಲ್ ನದಿಗೆ ಎಸೆದಿದ್ದಾರೆ.
ಬಾಲಕಿ ನಾಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರು ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಬಾಲಕಿ ಜೊತೆ ಆಕೆಯ ಸ್ನೇಹಿತನೋರ್ವ ಇದ್ದಿದ್ದಾಗಿ ಗ್ರಾಮಸ್ಥರು ನೋಡಿರುವುದಾಗಿ ತಿಳಿದು ಬಂದಿದೆ. ಆಗ ವಿದ್ಯಾರ್ಥಿನಿ ಬಳಕೆ ಮಾಡಿರುವ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ ಯುವಕನ ಜೊತೆಗಿನ ಸಂಭಾಷಣೆ ಹಾಗೂ ಸಂದೇಶಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರ ಆಧಾರದ ಮೇಲೆ ಆತನನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ಡಿಸೆಂಬರ್ 27ರಂದು ಬಾಲಕಿಯನ್ನು ಆಕಾಶ್, ಗೋಲು ಹಾಗೂ ಮತ್ತೋರ್ವ ವ್ಯಕ್ತಿ ಅಪಹರಣ ಮಾಡಿ, ಟ್ರಕ್ನಲ್ಲಿ ಕೂಡಿ ಹಾಕಿದ್ದಾರೆ. ಎರಡು ದಿನಗಳ ಕಾಲ ಅಲ್ಲಿಯೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಪೊಲೀಸ್ ಪ್ರಕರಣ ದಾಖಲಾಗುತ್ತಿದ್ದಂತೆ ಸಿಕ್ಕಿಬೀಳುವ ಭಯದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಚಂಬಲ್ ನದಿಯಲ್ಲಿ ಮೃತದೇಹ ಎಸೆದಿರುವುದಾಗಿ ತಿಳಿಸಿದ್ದಾರೆ. ಬಾಲಕಿಯ ಮೃತದೇಹಕ್ಕಾಗಿ ಇದೀಗ ಚಂಬಲ್ ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಇಲ್ಲಿಯವರೆಗೆ ಆಕೆಯ ಮೃತದೇಹ ಪತ್ತೆಯಾಗಿಲ್ಲ.