-->
ತಾಯಿ ಕೊರೊನಾಕ್ಕೆ ಬಲಿಯಾದರೂ, ತಮಗೆ ಸಂಬಂಧವಿಲ್ಲವೆಂದ ಮಗಳು - ಅಳಿಯ: ಕೊನೆಗೆ ಅಂತ್ಯಸಂಸ್ಕಾರದ್ದೇ ದೊಡ್ಡ ಕತೆ!

ತಾಯಿ ಕೊರೊನಾಕ್ಕೆ ಬಲಿಯಾದರೂ, ತಮಗೆ ಸಂಬಂಧವಿಲ್ಲವೆಂದ ಮಗಳು - ಅಳಿಯ: ಕೊನೆಗೆ ಅಂತ್ಯಸಂಸ್ಕಾರದ್ದೇ ದೊಡ್ಡ ಕತೆ!

ಬೆಂಗಳೂರು: ಹೆತ್ತತಾಯಿ ಕೊರೊನಾ ಸೋಂಕಿತೆಯಾಗಿ ಆಸ್ಪತ್ರೆಯಲ್ಲಿದ್ದಾರೆಂದು ತಿಳಿಸಿದ್ದರೂ ನೋಡಲು ಬಾರದ ಮಗಳು-ಅಳಿಯ, ಕೊನೆಗೆ ಆಕೆ ಮೃತಪಟ್ಟರೂ ಬರಲು ತಗಾದೆ ತೆಗೆದ ಅಮಾನವೀಯ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. 

ಮಂಡ್ಯ ಮೂಲದ ಭಾಗ್ಯಲಕ್ಷ್ಮಿ (52) ಕೋವಿಡ್​ನಿಂದ ಮೃತಪಟ್ಟ ಮಹಿಳೆ. ಭಾಗ್ಯಲಕ್ಷ್ಮಿ ಬೆಂಗಳೂರಿನ ಸಂಜಯನಗರದ ಗೆದ್ದಲಹಳ್ಳಿಯಲ್ಲಿ ವಾಸವಿದ್ದರು. ಏರ್​ಫೋರ್ಸ್​ನಲ್ಲಿ ಉದ್ಯೋಗಿಯಾಗಿದ್ದ ಭಾಗ್ಯಲಕ್ಷ್ಮಿ ಕೊರೊನಾ ಸೋಂಕಿಗೆ ತುತ್ತಾಗಿ ಶುಕ್ರವಾರ ಅಸ್ವಸ್ಥಗೊಂಡಿದ್ದರು. ಆದ್ದರಿಂದ ಈಕೆ ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ  ಮನೆಯಲ್ಲಿನ ನಾಯಿ-ಬೆಕ್ಕಿಗಾಗಿ ಮಾಂಸ ಕೊಂಡುಕೊಳ್ಳಲು ಹೋಗುತ್ತಿದ್ದ ಗಂಗೇನಹಳ್ಳಿಯಲ್ಲಿರುವ ಚಿಕನ್ ಅಂಗಡಿಯ ಸಂಶೀರ್​ಗೆ ಕರೆ ಮಾಡಿ ತಿಳಿಸಿದ್ದರು. 

ಆ ಬಳಿಕ ಸಂಶೀರ್ ಭಾಗ್ಯಲಕ್ಷ್ಮಿಯನ್ನು  ಆಸ್ಪತ್ರೆಗೆ ದಾಖಲು ಮಾಡಿ, ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವಿಷಯವನ್ನು ಸಂಜಯನಗರದ ಎಎಸ್​ಐ ಶ್ರೀನಿವಾಸ್​ಗೂ ತಿಳಿಸಿದ್ದರು‌. ಆ ಬಳಿಕ ಸಂಶೀರ್, ಭಾಗ್ಯಲಕ್ಷ್ಮಿಯ ಮಗಳು-ಅಳಿಯನ ಬರುವಿಕೆಗೆ ಕಾಯುತ್ತಿದ್ದರು. ಆಸ್ಪತ್ರೆಯಲ್ಲಿ ಕೋವಿಡ್​ ಪಾಸಿಟಿವ್ ಆಗಿದ್ದಾರೆ ಎಂಬುದನ್ನು ತಿಳಿಸಿದರೂ, ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳಿ, ಮಗಳು-ಅಳಿಯ ಕರೆ ಕಟ್ ಮಾಡಿದ್ದರು. 

ನಿನ್ನೆ ಭಾಗ್ಯಲಕ್ಷ್ಮಿ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ್ದಾರೆ. ಆ ಬಳಿಕವೂ ಎಎಸ್​ಐ ಶ್ರೀನಿವಾಸ್ ಮತ್ತು ಸಂಶೀರ್, ಭಾಗ್ಯಲಕ್ಷ್ಮಿ ಅಳಿಯನಿಗೆ ಕರೆ ಮಾಡಿ ತಿಳಿಸಿದರೂ, ‘ನೀವೇ ಏನಾದರೂ ಮಾಡಿಕೊಳ್ಳಿ’ ಎಂದು ಕರೆ ಕಟ್ ಮಾಡಿದ್ದರು. ನಿನ್ನೆ ರಾತ್ರಿಯಿಡೀ ಹೆಬ್ಬಾಳ ಶಾಂತಿಧಾಮದಲ್ಲೇ ಮೃತದೇಹವಿಟ್ಟು ಆ್ಯಂಬುಲೆನ್ಸ್ ಡ್ರೈವರ್ ಮಂಜುನಾಥ್, ಸಂಶೀರ್, ಎಎಸ್ಐ ನಾಗರಾಜ್ ಕಾದಿದ್ದಾರೆ. ಆದರೆ ಮಗಳು ಅಳಿಯನ ಪತ್ತೆಯಿಲ್ಲ.

ಆ ಬಳಿಕ ಸಂಜಯನಗರ ಇನ್​ಸ್ಪೆಕ್ಟರ್​ ಬಾಲರಾಜ್, ಭಾಗ್ಯಲಕ್ಷ್ಮಿಯವರ ಅಳಿಯನಿಗೆ ಕರೆ ಮಾಡಿ, ಠಾಣೆಗೆ ಕರೆಸಿಕೊಂಡು ಬುದ್ಧಿ ಹೇಳಿದ್ದಾರೆ. ಆ ಬಳಿಕವಷ್ಟೇ ಅಂತ್ಯಸಂಸ್ಕಾರ ಮಾಡಲು ಮಗಳು ಮಧುಶ್ರೀ ಹಾಗೂ ಅಳಿಯ ಮೋಹನ್ ಕುಮಾರ್ ಒಪ್ಪಿದ್ದಾರೆ. ಆ ನಂತರ ಅವರಿಗೆ ಮೃತದೇಹವನ್ನು ಪೊಲೀಸರು ಒಪ್ಪಿಸಿದ್ದು, ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ.

Ads on article

Advertise in articles 1

advertising articles 2

Advertise under the article