ಮೀನಿನ ಬದಲು ಗಾಳಕ್ಕೆ ಮೊಸಳೆ ಮರಿ: ಬೆಚ್ಚಿಬಿದ್ದ ಮೀನುಗಾರ

ಶಿವಮೊಗ್ಗ: ಗಾಳ ಹಾಕಿ ಮೀನು ಹಿಡಿಯಲು ಹೋದವರಿಗೆ ಮೊಸಳೆ ಮರಿ ಸಿಕ್ಕಿಬಿದ್ದ ಘಟನೆ ತಾಲೂಕಿನಲ್ಲಿ ನಡೆದಿದೆ. ಗಾಳದಲ್ಲಿ ಮೊಸಳೆ ಮರಿಯನ್ನು ಕಂಡು ಮೀನು ಹಿಡಿಯಲು ಹೋದವರು ಬೆಚ್ಚಿ ಬಿದ್ದಿದ್ದಾರೆ.

ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ ಗ್ರಾಮದ ರಶೀದ್ ಅವರ ಗಾಳಕ್ಕೆ ಈ ಮೊಸಳೆ ಸಿಕ್ಕಿದೆ. ರಶೀದ್ ಅವರು ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಗಾಳ ಹಾಕಿ, ಮೀನು ಹಿಡಿಯುತ್ತಿದ್ದರು. ಆಗ ಹಾಕಿದ್ದ ಗಾಳ ಜಗ್ಗಿದಂತಾಗಿದೆ. ತಕ್ಷಣ ಅವರು ಗಾಳವನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. ಆಗ ಗಾಳಕ್ಕೆ ಮೀನಿನ ಬದಲು ಮೊಸಳೆ ಮರಿಯೊಂದು ಸಿಕ್ಕಿಬಿದ್ದಿತ್ತು. ಇದನ್ನು ಕಂಡು ಭಯಗೊಂಡ ಅವರು ನೆರೆಹೊರೆಯವರಿಗೆ ವಿಚಾರ ತಿಳಿಸಿದ್ದಾರೆ.

ತುಂಗಾ ನದಿ ಬಳಿಗೆ ಜನರು ಹೋಗಿ ಬರುತ್ತಾರೆ. ದನಕರುಗಳು ಕೂಡ ನೀರು ಕುಡಿಯಲೆಂದು ಹೊಳೆಗೆ ಬರುತ್ತಿರುತ್ತವೆ. ನದಿಯಲ್ಲೀಗ ಮೊಸಳೆಗಳು ಇರುವುದು ಗೊತ್ತಾಗುತ್ತಿದ್ದಂತೆ ಜನತೆ ಎಚ್ಚೆತ್ತುಕೊಂಡಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.