-->

ಈಗಿರೋದು ಅತ್ಯಾಚಾರಿಗಳನ್ನು ಪ್ರೀತಿಸುವ ಸಮಾಜ: ನಟಿ ಪಾರ್ವತಿ ಪರ ನಿಂತ‌ ಗಾಯಕಿ ಚಿನ್ಮಯಿ ಶ್ರೀಪಾದ

ಈಗಿರೋದು ಅತ್ಯಾಚಾರಿಗಳನ್ನು ಪ್ರೀತಿಸುವ ಸಮಾಜ: ನಟಿ ಪಾರ್ವತಿ ಪರ ನಿಂತ‌ ಗಾಯಕಿ ಚಿನ್ಮಯಿ ಶ್ರೀಪಾದ

ಚೆನ್ನೈ: ಹಾಡುಗಾರ್ತಿ ಹಾಗೂ ಡಬ್ಬಿಂಗ್​ ಕಲಾವಿದೆಯಾಗಿರುವ ಚಿನ್ಮಯಿ ಶ್ರೀಪಾದ  ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಪಕ್ಕಾ ಸ್ತ್ರೀವಾದಿ ಎಂದು ಬ್ರ್ಯಾಂಡ್​ ಆಗಿರುವ ಚಿನ್ಮಯಿ ಇದೀಗ ಸಮಾಜವನ್ನು ಅತ್ಯಾಚಾರಿಗಳನ್ನು ನೋಡುವ ದೃಷ್ಟಿಕೋನವನ್ನು ವಿವರಿಸಿ, ಆಕ್ರೋಶ ಹೊರಹಾಕಿದ್ದಾರೆ. 

2017ರಲ್ಲಿ ಮಲಯಾಳಂನ ಖ್ಯಾತ ನಟಿಯೊಬ್ಬರನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು.  ಈ ಪ್ರಕರಣದ ಕುರಿತು ಕೆಲವು ದಿನಗಳಿಂದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಇತ್ತೀಚೆಗಷ್ಟೇ ಪ್ರಕರಣದ ಸಂತ್ರಸ್ತ ನಟಿ ಇನ್​ಸ್ಟಾಗ್ರಾಂನಲ್ಲಿ ತಮ್ಮ ಕಹಿ ಅನುಭವವನ್ನು ನೆನಪು ಮಾಡಿಕೊಂಡಿದ್ದರು. ಅಲ್ಲದೆ ಚಿತ್ರರಂಗದ ಅನೇಕ ಗಣ್ಯರು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಸಂತ್ರಸ್ತ ನಟಿಗೆ ಬೆಂಬಲ ನೀಡಿದವರಲ್ಲಿ ನಟಿ ಪಾರ್ವತಿ ಥಿರುವೊತ್ತು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ.

ನಟಿ ಪಾರ್ವತಿ ಸಿನಿ ರಂಗದ ಮಹಿಳಾ ದೌರ್ಜನ್ಯಗಳ ವಿರುದ್ಧ ಸದಾ ಧ್ವನಿ ಎತ್ತುತ್ತಲೇ ಇರುತ್ತಾರೆ. ಪರಿಣಾಮ ಚಿತ್ರರಂಗದಲ್ಲಿ ಪಾರ್ವತಿಗೆ ಅವಕಾಶಗಳು ಕಡಿಮೆಯಾಗಿವೆ. ಈ ವಿಚಾರದ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಪಾರ್ವತಿಯೇ ಹೇಳಿಕೊಂಡಿದ್ದಾರೆ. ಅಲ್ಲದೆ, ಅವರು ತಮಗೆ ಬೆದರಿಕೆಯ ಕರೆಗಳು ಬರುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದೀಗ ಅವರ ಬಳಿ ಎರಡೇ ಎರಡು ಚಿತ್ರಗಳಿರುವುದಾಗಿ ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಚಿನ್ಮಯಿ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿದ್ದಾರೆ. ಪಾರ್ವತಿ ಓರ್ವ ಅದ್ಭುತ ಕಲಾವಿದೆ. ದೌರ್ಜನ್ಯಕ್ಕೊಳಗಾದವರ ಪರ ಧ್ವನಿ ಎತ್ತಿ ಅವಕಾಶಗಳಿಂದ ವಂಚಿತರಾಗಿದ್ದಾರೆ. ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ ಮಾಡಿ ಆಕೆ ಕೆಲಸ ಕಳೆದುಕೊಂಡಿದ್ದಂತೂ ಸತ್ಯ. ಆದರೆ, ಕೆಲವೊಬ್ಬ ಮಹಿಳೆಯರು ವಿವಿಧ ಕಾರಣಗಳಿಂದ ಈ ವಿಚಾರದಲ್ಲಿ ಸುಮ್ಮನಾಗಿದ್ದಾರೆ. ಆದ್ದರಿಂದ ಇದು ಅತ್ಯಾಚಾರಿಗಳನ್ನು ಪ್ರೀತಿಸುವ ಸಮಾಜವಾಗಿದೆ ಎಂದು ಚಿನ್ಮಯಿ ಅಸಮಾಧಾನ ಹೊರಹಾಕಿದ್ದಾರೆ. 

ಚಿನ್ಮಯಿ ಅವರು ದಕ್ಷಿಣ ಭಾರತದಲ್ಲಿ ಮೀಟೂ ಚಳುವಳಿಯನ್ನು ಮುನ್ನಡೆಸಿದವರು. ಆ ಸಮಯದಲ್ಲಿ, ಅವರು ತಮಿಳು ಚಿತ್ರರಂಗದ ಪ್ರಮುಖ ಬರಹಗಾರ ವೈರಮುತ್ತು ವಿರುದ್ಧ ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಕನ್ನಡದ ಗಾಯಕ ರಘು ದೀಕ್ಷಿತ ವಿರುದ್ಧವೂ ಮೀಟೂ ಆರೋಪ ಮಾಡಿದ್ದರು. 

Ads on article

Advertise in articles 1

advertising articles 2

Advertise under the article