-->

ಪೆಟ್ರೋಲ್ ಅಗತ್ಯವೂ ಇಲ್ಲ, ಚಾರ್ಜ್ ಮಾಡೋದೂ ಬೇಡ... ಸಂಚರಿಸುತ್ತಲೇ ಚಾರ್ಜ್ ಆಗುತ್ತದಂತೆ ಈ ಇ-ಬೈಕ್

ಪೆಟ್ರೋಲ್ ಅಗತ್ಯವೂ ಇಲ್ಲ, ಚಾರ್ಜ್ ಮಾಡೋದೂ ಬೇಡ... ಸಂಚರಿಸುತ್ತಲೇ ಚಾರ್ಜ್ ಆಗುತ್ತದಂತೆ ಈ ಇ-ಬೈಕ್

ನವದೆಹಲಿ: ಇತ್ತೀಚಿನ‌ ದಿನಗಳಲ್ಲಿ ವಾಯುಮಾಲಿನ್ಯ ಪ್ರಕೋಪಕ್ಕೆ ಹೋಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪೆಟ್ರೋಲ್‌ ವಾಹನಗಳ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಇಲೆಕ್ಟ್ರಿಕ್ ಗಾಡಿಗಳು ಬೀದಿಗಿಳಿದಿವೆ. ಇದೀಗ ಬೈಕ್‌, ಸ್ಕೂಟರ್‌ಗಳಷ್ಟೇ ಅಲ್ಲ ಬಸ್ಸುಗಳು ಕೂಡ ಇಲೆಕ್ಟ್ರಿಕ್‌ ಆಗಿ ಪರಿವರ್ತನೆಗೊಂಡಿವೆ. 

ಈಗಾಗಲೇ ಇಲೆಕ್ಟ್ರಿಕ್‌ ಬೈಕ್‌ಗಳು ಭರ್ಜರಿ ಮಾರಾಟವಾಗುತ್ತಿದೆ. ಇಲೆಕ್ಟ್ರಿಕ್‌ ಚಾರ್ಜಿಂಗ್‌ ಬೈಕ್‌ಗಳು ನೂರಾರು ಕಿಲೋ ಮೀಟರ್‌ ಓಡಾಡುತ್ತದೆ. ಆದರೆ, ಇನ್ನೂ ಸಾಕಷ್ಟು ಚಾರ್ಜಿಂಗ್‌ ಪಾಯಿಂಟ್‌ ಇಲ್ಲದಿರುವುದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಂಥವರಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ ಪುದುಚೇರಿ ಮೂಲದ ವಿಜಯನ್ ಪ್ರೇಮಾನಂದ್ ಅವರು. 

ಇವರು ಯಾರೂ ಊಹಿಸದೇ ಇರುವ ಹೊಸದೊಂದು ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಅದೇನೆಂದರೆ ಇವರು ಕಂಡುಹಿಡಿದಿರುವ ಬೈಕ್‌ ಅನ್ನು ಚಾರ್ಜ್‌ ಮಾಡುವ ಅವಶ್ಯಕತೆ ಇಲ್ಲ. ಹಾಗೆಂದು ಪೆಟ್ರೋಲ್‌ ಬೇಡವೇ ಬೇಡ. 

ಹಾಗಿದ್ದರೆ ಅದೆಂಥ ತಂತ್ರಜ್ಞಾನ ಅಂದಿರಾ? ವಿಜಯನ್ ಕಂಡುಹಿಡಿದಿರುವ ಈ ಬೈಕ್‌ನಲ್ಲಿ ಇರುವ ಎರಡು ಬ್ಯಾಟರಿಗಳು ಅದರಷ್ಟಕ್ಕೇ ಚಾರ್ಜ್‌ ಆಗುತ್ತವೆ. ಅಂದರೆ ಈ ಬ್ಯಾಟರಿ ವಾಹನಗಳು ಸಂಚಾರದಲ್ಲಿರುವಾಗಲೇ ಚಾರ್ಜ್‌ ಆಗುತ್ತದೆ. ಇದಕ್ಕಾಗಿ ಚಾರ್ಜಿಂಗ್ ಸ್ಟೇಷನ್‌ಗೆ ಹೋಗಬೇಕಾಗಿಯೇ ಇಲ್ಲ. ಇದರಿಂದ ವಿದ್ಯುತ್ ಉಳಿತಾಯ ಕೂಡ ಆಗುತ್ತದೆ ಎನ್ನುತ್ತಾರೆ ವಿಜಯನ್‌. 

ಚಾರ್ಜಿಂಗ್ ವಾಹನಗಳಿಗಾಗಿ ಇವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯಿಂದ ಪೇಟೆಂಟ್‌ ಕೂಡ ಪಡೆದುಕೊಂಡಿದ್ದಾರೆ. 'ವಿದ್ಯುತ್‌ ಚಾರ್ಜಿಂಗ್‌ ಪಾಯಿಂಟ್‌ಗಳು ಸದ್ಯ ಬೇಕೆಂದ ಕಡೆಗಳಲ್ಲಿ ದೊರಕುವುದಿಲ್ಲ. ತಾನು ಕಂಡುಹಿಡಿದಿರುವ ಈ ಬೈಕ್‌ ಈ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಚಾರ್ಜಿಂಗ್ ಸ್ಟೇಷನ್‌ನಲ್ಲಿ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಇದರಲ್ಲಿ ಇರುವ ಬ್ಯಾಟರಿಗಳು ಪರಸ್ಪರ ಚಾರ್ಜ್ ಆಗುವಂತೆ ವಿನ್ಯಾಸ ಮಾಡಲಾಗಿದೆ. ಈ ಎರಡೂ ಬ್ಯಾಟರಿಗಳು ಚಾರ್ಜ್ ಆಗುವುದರಿಂದ ಶಕ್ತಿಯ ಬಳಕೆ ತುಂಬಾ ಕಡಿಮೆಯಾಗುತ್ತದೆ. ಇದರ ಅರ್ಥ ಬೇರೆ ಬ್ಯಾಟರಿಗಳಂತೆ ಬೇಗನೆ ಚಾರ್ಜ್‌ ಖಾಲಿಯಾಗುವುದಿಲ್ಲ' ಎನ್ನುತ್ತಾರೆ ವಿಜಯನ್‌. 

ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು, ಹಲವು ವಾಹನ ತಯಾರಕರನ್ನು ಕೋರಲಾಗಿದೆ. ಕಂಪೆನಿಗಳ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ಇದೆಲ್ಲಾ ಒಪಗಪಿಗೆಯಾದಲ್ಲಿ ಇನ್ನು ಯಾವುದೇ ಸಮಸ್ಯೆ ಇರದ ಬೈಕ್‌ಗಳು ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು ಅವರು ವಿಶ್ವಾಸದಿಂದ ಹೇಳುತ್ತಾರೆ.

Ads on article

Advertise in articles 1

advertising articles 2

Advertise under the article