-->
ವಿವಾಹವಾಗುವುದಾಗಿ ನಂಬಿಸಿ ಸಲುಗೆಯಿಂದಿರುವಾಗ ಫೋಟೋ ತೆಗೆದು ವಂಚನೆ: ಯುವತಿಯ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ‌ ಅಂದರ್

ವಿವಾಹವಾಗುವುದಾಗಿ ನಂಬಿಸಿ ಸಲುಗೆಯಿಂದಿರುವಾಗ ಫೋಟೋ ತೆಗೆದು ವಂಚನೆ: ಯುವತಿಯ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ‌ ಅಂದರ್

ಬೆಂಗಳೂರು: ಯುವತಿಯೋರ್ವಳಿಗೆ ವಿವಾಹವಾಗುವ ಭರವಸೆ ಮೂಡಿಸಿ ಆಕೆಯೊಂದಿಗೆ ಸಲುಗೆಯಿಂದಿದ್ದ ತೆಗೆಸಿಕೊಂಡಿದ್ದ  ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿ ಹಣಕ್ಕೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ನಗರ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. 

ಕೆಲ‌ ತಿಂಗಳ ಹಿಂದೆ ಈ ಯುವತಿಯು ಆರೋಪಿಗೆ ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿದ್ದಳು. ಈಕೆ ಮ್ಯಾಟ್ರಿಮೊನಿ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಳು. ರಾಜಾಜಿನಗರ ನಿವಾಸಿ ಆರೋಪಿ ವಿಜಯ್ ಕುಮಾರ್ ಯುವತಿಯರನ್ನು ವಂಚಿಸುವ ಉದ್ದೇಶದಿಂದಲೇ ಮ್ಯಾಟ್ರಿಮೊನಿಯಲ್ಲಿ ತಾನೂ ಹೆಸರು ನೋಂದಾಯಿಸಿದ್ದ. 

ಈ ಮುಖೇನ ಇಬ್ಬರೂ ಪರಿಚಯಗೊಂಡಿದ್ದರು.‌ ಪರಿಚಯ ಸ್ನೇಹಕ್ಕೆ ತಿರುಗಿದೆ.‌ ಇದೇ ಸಲುಗೆಯಿಂದಲೇ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಕೆಲ ದಿನಗಳ ಬಳಿಕ ವಿವಾಹವಾಗುವ ಒಪ್ಪಂದಕ್ಕೆ‌ ಬಂದಿದ್ದರು. ಈ ವೇಳೆ ಆರೋಪಿ ವಿಜಯ್ ಕುಮಾರ್ ಯುವತಿಯೊಂದಿಗೆ ತನ್ನ ಮೊಬೈಲ್ ನಲ್ಲಿ ಪೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದ. ಬಳಿಕ‌ ಇದೇ ಪೋಟೊಗಳನ್ನೇ ಇಟ್ಟುಕೊಂಡು ಯುವತಿಯನ್ನು ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಲು ಆರಂಭಿಸಲು ತೊಡಗಿದ್ದಾನೆ.‌ ಈತನ ಬೆದರಿಕೆಗೆ ಆಕೆ ಸೊಪ್ಪು ಹಾಕಿರಲಿಲ್ಲ.

ಆದ್ದರಿಂದ ಆರೋಪಿ ವಿಜಯ್ ಕುಮಾರ್ ಯುವತಿಯ ಹೆಸರಿನಲ್ಲಿಯೇ ಇನ್ ಸ್ಟಾಗ್ರಾಂ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ಪೋಟೊಗಳನ್ನು ಅಪ್ ಲೋಡ್ ಮಾಡಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಆರೋಪಿಗೆ 50 ಸಾವಿರ‌ ರೂ. ನೀಡಿ, ನಕಲಿ ಖಾತೆಯನ್ನು ಡಿಲೀಟ್ ಮಾಡುವಂತೆ ಹೇಳಿದ್ದಾಳೆ. ಆದರೆ ಆರೋಪಿ ಮತ್ತೆ ಹೆಚ್ಚು ಹಣ ನೀಡುವಂತೆ ಬೆದರಿಸಲು ಆರಂಭಿಸಿದ್ದಾನೆ. ಹಣ ನೀಡದಿದ್ದರೆ ಕುಟುಂಬಸ್ಥರಿಗೆ ಹಾಗೂ ಸಂಬಂಧಿಕರ ಪ್ರೊಫೈಲ್ ಗಳಿಗೆ ಫೋಟೋ ಟ್ಯಾಗ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. 

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಿಇಎನ್ ಪೊಲೀಸರು ಆರೋಪಿಯನ್ನು ವಿದ್ಯಾರಣ್ಯಪುರದಲ್ಲಿ ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article