ಮಗು ಗಂಟಲಲ್ಲೇ ಸಿಲುಕಿಕೊಂಡಿತು 5 ರೂ. ನಾಣ್ಯ: ಮುಂದೇನಾಯ್ತು ಗೊತ್ತೇ!

ಯಾದಗಿರಿ: ಪುಟ್ಟ ಮಕ್ಕಳಿರುವ ಮನೆಯಲ್ಲಿ ಮೈಯೆಲ್ಲಾ ಕಣ್ಣಾಗಿಯೇ ಇರಬೇಕಾಗುತ್ತದೆ. ಅವರು ಮಾಡುವ ಪ್ರತೀ ಆ್ಯಕ್ಟಿವಿಟಿ ಮೇಲೆ ನಿಗಾ ಇರಿಸಲೇ ಬೇಕಾಗುತ್ತದೆ. ಇಲ್ಲದಿದ್ದಲ್ಲಿ ಮಕ್ಕಳ ಪ್ರಾಣಕ್ಕೇ ಕುತ್ತು ತರುವ ಘಟನೆಗಳು ನಡೆಯುವುದೇ ನಿಜ. ಇಲ್ಲೊಂದು ಕಡೆಯಲ್ಲಿ ನಡೆದ ಘಟನೆ ಈ ಮಾತು ಅಕ್ಷರಶಃ ನಿಜವೆಂದು ಸಾರುತ್ತದೆ. 

ಈ ಮಗುವಿನ ಆಯಸ್ಸು ಗಟ್ಟಿ ಇದ್ದ ಪರಿಣಾಮ ದೇವರ ರೂಪದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಟ್ಟ ವೈದ್ಯರು ಮಗುವಿನ ಗಂಟಲ್ಲಿ ಸಿಕ್ಕಿಹಾಕಿಕೊಂಡಿದ್ದ 5 ರೂ. ನಾಣ್ಯ ಹೊರ ತೆಗೆದು ಪ್ರಾಣ ಉಳಿಸಿದ್ದಾರೆ. ಈ ಘಟನೆ ಗುರುವಾರ ಮಧ್ಯಾಹ್ನ ಕೋಲಿವಾಡ ಬಡಾವಣೆ ಎಂಬಲ್ಲಿ ಸಂಭವಿಸಿದೆ. 3 ವರ್ಷದ ಭರತ್​ ಎಂಬ ಮನೆಯಲ್ಲಿ ಮಗು 5ರೂ. ನಾಣ್ಯ ಹಿಡಿದುಕೊಂಡು ಆಟವಾಡುತ್ತಿತ್ತು. ಆಟವಾಡುತ್ತಾ ಆ ನಾಣ್ಯವನ್ನು ಬಾಯಲ್ಲಿ ಹಾಕಿಕೊಂಡಿದೆ. ಇದನ್ನು ಪಾಲಕರು ಗಮನಿಸಿರಲಿಲ್ಲ. ಕ್ಷಣಾರ್ಧದಲ್ಲೇ ಮಗುವಿನ ಉಸಿರಾಟದಲ್ಲಿ ಏರುಪೇರಾಗಿ ಒದ್ದಾಡಲು ಆರಂಭಿಸಿದೆ. ಏನಾಯ್ತೆಂದು ಪಾಲಕರು ನೋಡಿದಾಗ ಮಗು ನಾಣ್ಯ ನುಂಗಿರುವುದು ಗೊತ್ತಾಗಿದೆ. 

ತಕ್ಷಣ ಮನೆಯಲ್ಲಿಯೇ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಮಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಡಾ.ನಾಯ್ಕೋಡಿ ಇಎನ್​ಟಿ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದಾರೆ. ಗಂಟಲಲ್ಲೇ ನಾಣ್ಯ ಇರುವುದನ್ನು ಎಕ್ಸ್​ರೇಯಲ್ಲಿ ಖಚಿತಪಡಿಸಿಕೊಂಡ ಇಎನ್​ಟಿ ತಜ್ಞ ಡಾ.ರಾಹುಲ್​ ನಾಯ್ಕೋಡಿ ಅವರು ಡಾ.ಚೇತನ್​, ಮಕ್ಕಳ ತಜ್ಞ ಡಾ.ವೈಜನಾಥ ದುಗ್ಗಾಣಿಕರ್​ ಜತೆ ಕೆಲಹೊತ್ತು ಚರ್ಚೆ ನಡೆಸಿದ ಬಳಿಕ ರಾತ್ರಿ ನಾಣ್ಯವನ್ನು ಸ್ಕೋಪಿ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗು ಆರೋಗ್ಯವಾಗಿದ್ದು, ಪಾಲಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಕ್ಕಳ ಕೈಯಲ್ಲಿ ವಸ್ತುಗಳನ್ನು ಕೊಡಬೇಕಾದರೆ ಪಾಲಕರು ಎಚ್ಚರ ವಹಿಸಬೇಕು. ವಿಶೇಷವಾಗಿ ನಾಣ್ಯದಂಥ ಸಣ್ಣ ಮತ್ತು ಸೂಕ್ಷ್ಮ ವಸ್ತುಗಳನ್ನು ಕೊಡಕೂಡದು ಎಂದು ಡಾ.ರಾಹುಲ್​ ನಾಯ್ಕೊಡಿ  ಪಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.