ಇನ್‌ಸ್ಟಾಗ್ರಾಂನಲ್ಲಿ 30 ಕೋಟಿ ಫಾಲೋವರ್ಸ್‌ ಹೊಂದಿ ವಿಶ್ವ ದಾಖಲೆ ನಿರ್ಮಿಸಿದ ಅಮೇರಿಕಾದ ಮಾಡೆಲ್

ನ್ಯೂಯಾರ್ಕ್‌: ಅಮೆರಿಕಾದ ಮಾಡೆಲ್‌, ರಿಯಾಲಿಟಿ ಶೋ ತಾರೆ ಹಾಗೂ ಉದ್ಯಮಿಯಾಗಿರುವ ಕೈಲಿ ಜೆನ್ನರ್‌ ಎಂಬಾಕೆ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಆಕೆ ಇನ್‌ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್‌ ಹೊಂದಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಕೈಲಿ ಜೆನ್ನರ್‌ ಇನ್‌ಸ್ಟಾಗ್ರಾಂನಲ್ಲಿ 300 ಮಿಲಿಯನ್‌ ಅಂದರೆ 30 ಕೋಟಿ ಫಾಲೋವರ್ಸ್‌ ಗಳನ್ನು ಹೊಂದಿದ್ದಾರೆ. ಇಲ್ಲಿಯವರೆಗೆ ಈ ವಿಶ್ವದಾಖಲೆಯು ಪಾಪ್‌ ಸಿಂಗರ್‌ ಅರಿಯಾನಾ ಗ್ರಾಂಡೆಯವರ ಹೆಸರಿನಲ್ಲಿತ್ತು. ಅವರನ್ನು ಹಿಂದಿಕ್ಕಿ ಈಗ ಕೈಲಿ ಜೆನ್ನರ್‌ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 

24 ವರ್ಷದ ಕೈಲಿ ಜೆನ್ನರ್‌, ಮಹಿಳೆಯರಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ, ಪುರುಷರನ್ನೂ ಸೇರಿಸಿದಾಗ ಅತೀ ಹೆಚ್ಚು ಫಾಲೋವರ್ಸ್‌ ಹೊಂದಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ 388 ಫಾಲೋವರ್ಸ್‌ ಗಳನ್ನು ಹೊಂದಿರುವ ಖ್ಯಾತ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದಾರೆ.

ಇದಾಗಲೇ ಮಗುವೊಂದರ ತಾಯಿಯಾಗಿರುವ ಕೈಲಿ ಜೆನ್ನರ್, ಇದೀಗ ಎರಡನೆಯ ಬಾರಿ ಗರ್ಭವತಿಯಾಗಿದ್ದಾರೆ. ಇವರ ಪತಿ ಟ್ರಾವಿಸ್‌ ಸ್ಕಾಟ್‌ ಖ್ಯಾತ ರ‍್ಯಾಪರ್‌ ಆಗಿದ್ದಾರೆ. ಆಸ್ಟ್ರೋವರ್ಲ್ಡ್‌ ಎಂಬಲ್ಲಿ ಈತ ಪ್ರದರ್ಶನ ನೀಡುತ್ತಿದ್ದ ವೇಳೆ ಕಾಲ್ತುಳಿತ ಉಂಟಾಗಿತ್ತು. ಅದರಲ್ಲಿ 10 ಮಂದಿ ಮೃತಪಟ್ಟಿದ್ದರು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಇದರಿಂದ ಮನನೊಂದ ಕೈಲಿ ಜೆನ್ನರ್ ಸಾಮಾಜಿಕ ಜಾಲತಾಣದಿಂದಲೂ ದೂರವಾಗಿದ್ದರು. 

ಇದರ ಹೊರತಾಗಿಯೂ ಇದೀಗ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕಳೆದ ಕ್ರಿಸ್‌ಮಸ್‌ನಲ್ಲಿ ತನ್ನ ತಾಯಿ ಕ್ರಿಸ್‌ ಜೆನ್ನರ್‌ ಅವರ ಫೋಟೋವನ್ನು ಪೋಸ್ಟ್‌ ಮಾಡಿದ್ದ ಕೈಲಿ ಜೆನ್ನರ್, ಆ ಬಳಿಕ ತಾವು ಎರಡನೆಯ ಬಾರಿ ಗರ್ಭಿಣಿಯಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.