ನವದೆಹಲಿ: ವೈದ್ಯೆಯಾಗುವ ಕನಸು ಹೊತ್ತಿದ್ದ ಯುವತಿಯೋರ್ವಳು ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ನವದೆಹಲಿಯ ಐಟಿಒನಲ್ಲಿರುವ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಯಾದವ್ (19) ಆತ್ಮಹತ್ಯೆ ಮಾಡಿಕೊಂಡಿರುವಾಕೆ. ಮಹಿಳಾ ಹಾಸ್ಟೆಲ್‍ನಲ್ಲಿ ವಾಸಿಸುತ್ತಿದ್ದ ದಿವ್ಯಾ ಯಾರೂ ಇಲ್ಲದ ವೇಳೆ ನೇಣಿಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ದಿವ್ಯಾ ಇತ್ತೀಚೆಗೆ ನಡೆದಿರುವ ಪರೀಕ್ಷೆಯಲ್ಲಿ ಎರಡು ಪೇಪರ್‌ಗಳಲ್ಲಿ ದಿವ್ಯಾ ಅನುತ್ತೀರ್ಣಳಾಗಿದ್ದಾಳೆ. ಇದರಿಂದ ಆಕೆ ಖಿನ್ನತೆಗೆ ಜಾರಿದ್ದಳು. ''ತಾಯಿ-ತಂದೆಗೆ ಯಾವ ರೀತಿ ಮುಖ ತೋರಿಸಲಿ? ಬಹಳಷ್ಟು ಖರ್ಚು ಮಾಡಿ ತನ್ನನ್ನು ಓದಿಸುತ್ತಿದ್ದಾರೆ. ಅವರಿಗೆ ಯಾವ ರೀತಿ ಮುಖ ತೋರಿಸಲಿ" ಎಂದು ದಿವ್ಯಾ ರೂಮ್ ಮೇಟ್ ಪದೇ ಪದೇ ಹೇಳುತ್ತಿದ್ದಳು ಎಂದು ಆಕೆಯ ಸಹಪಾಠಿಗಳು ಹೇಳುತ್ತಿದ್ದರು.
ಆದರೆ ಇಂದು ಬೆಳಗ್ಗೆ ಯಾರೂ ಇಲ್ಲದ ವೇಳೆ ದಿವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಕೊಠಡಿಯ ಒಳಗಿನಿಂದ ಚಿಲಕ ಹಾಕಿರುವ ಕಾರಣ ಹಾಸ್ಟೆಲ್ ಸಿಬ್ಬಂದಿ ಬಾಗಿಲನ್ನು ಒಡೆದು ತೆರೆದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಈ ವೇಳೆ ಆಕೆ ಬರೆದಿಟ್ಟ ಡೆತ್‌ನೋಟ್ ಪತ್ತೆಯಾಗಿದೆ. ದಿವ್ಯಾ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದಿದ್ದು ಮೃತದೇಹವನ್ನು ಆಕೆಯ ಕುಟುಂಬದವರಿಗೆ ಹಸ್ತಾಂತರಿಸಲಿಸಲಾಗಿದೆ.
 
   
 
 
 
 
 
 
 
 
 
 
 
 
 
 
 
 
 
