ಚಿತ್ರದುರ್ಗ: ಕಿಡಿಗೇಳು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೋರ್ವಳ ಬಟ್ಟೆಯನ್ನು ಎಳೆದಾಡಿ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣವಾಗಿರುವ ಆತಂಕಕಾರಿ ಘಟನೆಯೊಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೋಡಿಹಳ್ಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ. 
ಕಿಡಿಗೇಡಿಗಳ ಕೃತ್ಯದಿಂದ ಬೇಸತ್ತ 17 ವರ್ಷದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿದ್ಯಾರ್ಥಿನಿಗೆ ಹಲವು ಕಿಡಿಗೇಡಿಗಳು ದಿನನಿತ್ಯವೂ ಕೀಟಲೆ ಮಾಡುತ್ತಿದ್ದರು. ಈ ರೀತಿ ಮಾಡದಂತೆ ಗ್ರಾಮಸ್ಥರು ಅವರಿಗೆ ಎಚ್ಚರಿಕೆ ಕೂಡ ನೀಡಿದ್ದರು. ಆದರೂ ಕೃತ್ಯವನ್ನು ಅವರು ಮುಂದುವರೆಸಿದ್ದರು. 
ಮೊನ್ನೆ ಮತ್ತೆ ವಿದ್ಯಾರ್ಥಿನಿಯ ಬಟ್ಟೆಯನ್ನು ಎಳೆದಾಡಿ ಹಿಂಸೆ ನೀಡಿದ್ದಾರೆ. ಇದರಿಂದ ಮನನೊಂದ ಆಕೆ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂದರ್ಭ ಆಕೆಯ ಮೃತದೇಹವನ್ನು ಆಸ್ಪತ್ರೆಯಿಂದ ಪಡೆಯಲು ನಿರಾಕರಿಸಿರುವ ಪೋಷಕರು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಕಿಡಿಗೇಡಿಗಳನ್ನು ಬಂಧಿಸುವವರೆಗೂ ಮೃತದೇಹವನ್ನು ಆಸ್ಪತ್ರೆಯಿಂದ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದ್ದರು. 
ಈ ಸಂದರ್ಭ ತರೀಕೆರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಸುಮಾರು ಆರು ಗಂಟೆ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಚಿತ್ರದುರ್ಗ ಎಸ್ಪಿ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಮನವೊಲಿಸಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 
   
 
 
 
 
 
 
 
 
 
 
 
 
 
 
 
