ಹೈದರಾಬಾದ್: ಜಮೀನಿನಲ್ಲಿ ದೊರಕಿರುವ ನಿಧಿ ಇಬ್ಬರ ನಡುವಿನ ವಾಗ್ವಾದದಿಂದ ಯಾರಿಗೂ ಸೇರದೆ ಕೊನೆಗೆ ಪೊಲೀಸ್ ವಶವಾದ ಪ್ರಕರಣ ಬೆಳಕಿಗೆ ಬಂದಿದೆ. ಈ ಮೂಲಕ 'ಕೈ ಬಂದಿರುವ ತುತ್ತು ಬಾಯಿಗೆ ಬರಲಿಲ್ಲ' ಎಂಬ ಮಾತನ್ನು ನೆನಪಿಸುವಂತಹ ಪ್ರಕರಣವೊಂದು ತೆಲಂಗಾಣದ ಯಾದಾದ್ರಿ ಭುವನೇಶ್ವರ ಜಿಲ್ಲೆಯಲ್ಲಿ ನಡೆದಿದೆ.
ವಾರದ ಹಿಂದೆ ಭುವನೇಶ್ವರ ಜಿಲ್ಲೆಯ ರಾಮಣ್ಣಪೇಟ ವಲಯದಲ್ಲಿರುವ ಕುಂಕುಡಪಮುಲ ಗ್ರಾಮದಲ್ಲಿ ಕೊನ್ನೆಬೊಯ್ನ ಮಲ್ಲಯ್ಯ ಎಂಬುವರ ಜಮೀನಿನಲ್ಲಿ ಕೆಲಸ ಮಾಡುವಾಗ ಒಂದು ಮಡಿಕೆ ಮತ್ತು ಸಣ್ಣ ಕಬ್ಬಿಣದ ಪೆಟ್ಟಿಗೆ ದೊರಕಿತ್ತು. ಅದನ್ನು ತೆರೆದಾಗ ಅದರಲ್ಲಿ ಬೆಳ್ಳಿ ಪಟ್ಟಿಗಳು, ನಾಣ್ಯಗಳು, ಚಿನ್ನದ ಸ್ಟ್ಯಾಂಪ್ಸ್ ಸೇರಿದಂತೆ ಚಿನ್ನ ಮತ್ತು ಬೆಳ್ಳಿಯ ತುಣುಕುಗಳು ಪತ್ತೆಯಾಗಿದ್ದವು. ಆದರೆ, ಒಡ್ಡಿನ ಆಚೆ ಲಿಂಗಯ್ಯ ಎಂಬುವರ ಜಮೀನಿನಲ್ಲಿ ನಾಟಿ ಮಾಡಲು ಬಂದಿದ್ದ ಕೂಲಿಕಾರರಿಗೆ ಈ ವಿಚಾರ ತಿಳಿದಿದೆ. ಇದೇ ಸಂದರ್ಭ ಅಕ್ಲಿದ್ದ ಮಹಿಳೆಯೊಬ್ಬಳು ಇದು ಅಶುಭವೆಂದು, ಅವುಗಳನ್ನು ತೆಗೆದುಕೊಂಡರೆ ಕೇಡಾಗುತ್ತದೆ ಎಂದು ಸಾರುತ್ತಾ ಅಲ್ಲಿಂದ ಹೋಗಿದ್ದಾಳೆ.
ಇದರಿಂದ ಸ್ಥಳದಲ್ಲಿದ್ದವರಿಗೆ ಶಾಕ್ ಆಗಿದೆ. ಮಲ್ಲಯ್ಯ ಹಾಗೂ ಲಿಂಗಯ್ಯ ಸಹೋದರರು. ಆದರೆ ಮಲ್ಲಯ್ಯ ಬೆಳ್ಳಿ ನಾಣ್ಯಗಳು ಮತ್ತು ಚಿನ್ನದ ಅಂಚೆಚೀಟಿಗಳನ್ನು ಸಾಗಿಸಿ ರಹಸ್ಯ ಪ್ರದೇಶದಲ್ಲಿ ಬಚ್ಚಿಡುವ ವಿಚಾರ ಸಹೋದರ ಲಿಂಗಯ್ಯ ಅವರಿಗೆ ತಿಳಿದು ಬಂದಿದೆ. ಈ ಅಮೂಲ್ಯ ವಸ್ತುಗಳು ಎರಡು ಜಮೀನಿನ ಮಧ್ಯೆ ಇರುವ ಒಡ್ಡಿನಲ್ಲಿ ಪತ್ತೆಯಾದ್ದರಿಂದ ತನಗೂ ಒಂದು ಪಾಲು ಕೊಡುವಂತೆ ಲಿಂಗಯ್ಯ ಕೇಳಿದ್ದಾನೆ. 
ಆದರೆ, ಇದಕ್ಕೆ ಮಲ್ಲಯ್ಯ ಒಪ್ಪಿರಲಿಲ್ಲ. ಇದಕ್ಕಾಗಿ ಇಬ್ಬರ ನಡುವೆ ಕಿತ್ತಾಟ ನಡೆದಿದೆ. ಬಳಿಕ ಈ ವಿಚಾರ ಊರಿನ ಹಿರಿಯರ ಬಳಿವರೆಗೆ ಹೋಗಿದೆ. ಆದರೂ ಸರಿಯಾದ ಪರಿಹಾರ ದೊರಕಿರಲಿಲ್ಲ. 
ಕೊನೆಗೆ ಈ ಸಮಸ್ಯೆ ದೊಡ್ಡದಾಗುತ್ತದೆ ಎಂದರಿತು ಮಲ್ಲಯ್ಯ ರಾಮಣ್ಣಪೇಟೆಯ ಪೊಲೀಸ್ ಠಾಣೆಗೆ ಹೋಗಿ ಸಿಕ್ಕಂತಹ ಎಲ್ಲಾ ವಸ್ತುಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾನೆ. ವಾರದ ಬಳಿಕ ಪೊಲೀಸ್ ಠಾಣೆಯಲ್ಲೂ ಅವ್ಯವಹಾರ ನಡೆದಿದ್ದು ಬೆಳಕಿಗೆ ಬಂದಿದೆ. ಇದೀಗ ಹಿರಿಯ ಅಧಿಕಾರಿಗಳು ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. 
 
   
 
 
 
 
 
 
 
 
 
 
 
 
 
 
 
