ಬೆಂಗಳೂರು: ಫುಡ್ ಡೆಲಿವರಿ ಮಾಡುವುದು ತಡವಾಗುತ್ತಿದೆ ಎಂದು ಹೇಳಿರುವ ಡೆಲಿವರಿ ಬಾಯ್ ಕತ್ತಿಗೆ ಕೈಹಾಕಿ ಹೊರದಬ್ಬುವ ಮೂಲಕ ಮಹಿಳೆಯೋರ್ವಳು ದಬ್ಬಾಳಿಕೆ ನಡೆಸಿರುವ ಘಟನೆಯೊಂದು ನಗರದ ವೈಟ್ಫೀಲ್ಡ್ ಬಳಿಯ ಲಿಯಾನ್ ಗ್ರಿಲ್ ರೆಸ್ಟೋರೆಂಟ್ನಲ್ಲಿ ನಿನ್ನೆ ನಡೆದಿದೆ.
ಈ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡೆಲಿವರಿ ಬಾಯ್ ಸಂಜಯ್ ಎಂಬಾತ ಫುಡ್ ಪ್ಯಾಕೇಟ್ ಪಡೆಯಲು ಲಿಯಾನ್ ಗ್ರಿಲ್ ರೆಸ್ಟೋರೆಂಟ್ಗೆ ಬಂದಿದ್ದ. ಈ ವೇಳೆ ರೆಸ್ಟೋರೆಂಟ್ ನವರು ಪುಡ್ ಪ್ಯಾಕೆಟ್ ಕೊಡಲು ತಡಮಾಡಿರುವುದನ್ನು ಪ್ರಶ್ನಿಸಿದ್ದಾನೆ. "ನೀವು ಈ ರೀತಿ ತಡಮಾಡಿದ್ದಲ್ಲಿ ಗ್ರಾಹಕರಿಗೆ ಆಹಾರ ಪೊಟ್ಟಣ ಡೆಲಿವರಿ ಮಾಡುವುದು ವಿಳಂಬವಾಗುತ್ತದೆ"ಎಂದಿದ್ದಾನೆ.
ಇದರಿಂದ ಸಿಟ್ಟಾದ ಮಹಿಳಾ ಸಿಬ್ಬಂದಿಯೋರ್ವಳು ಆತನಿಗೆ ದಬಾಯಿಸಿದ್ದಾಳೆ. ಇಬ್ಬರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಆಕೆ ಡೆಲಿವರಿ ಬಾಯ್ ಕತ್ತಿಗೆ ಕೈಹಾಕಿ ಆತನನ್ನು ಎಳೆದೊಯ್ದ ರೆಸ್ಟೋರೆಂಟ್ನಿಂದ ಹೊರದಬ್ಬಿದ್ದಾಳೆ. ಘಟನೆಯ ಬಳಿಕ ಸಂಜಯ್ ಬೆನ್ನಿಗೆ ನಿಂತ ಕನ್ನಡಪರ ಸಂಘಟನೆಗಳು ರೆಸ್ಟೋರೆಂಟ್ ಮಾಲಕರನ್ನು ಸಂಪರ್ಕಿಸಿದ್ದಾರೆ. ಬಳಿಕ ರೆಸ್ಟೋರೆಂಟ್ ಮ್ಯಾನೇಜರ್ ಪ್ರಶಾಂತ್ ರನ್ನು ಭೇಟಿಯಾಗಿ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಲು ಆಗ್ರಹಿಸಿದ್ದಾರೆ. ಮಹಿಳೆಯ ಕೃತ್ಯ ಗಮನಿಸಿರುವ ಮ್ಯಾನೇಜರ್ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಅಲ್ಲದೆ, ಡೆಲಿವರಿ ಬಾಯ್ಗೆ ಒಂದು ದಿನದ ಸಂಬಳವನ್ನು ಸಂಘಟನೆಗಳು ಕೊಡಿಸಿವೆ.