-->

ಹೆಲ್ಮೆಟ್ ಧರಿಸಿಲ್ಲವೆಂದು 8 ವರ್ಷದ ಪುತ್ರಿಯ ಮುಂದೆಯೇ ಪೊಲೀಸ್ ಅಧಿಕಾರಿಯಿಂದ ವ್ಯಕ್ತಿಗೆ ಕಪಾಳಮೋಕ್ಷ: ನೆಟ್ಟಿಗರಿಂದ ಆಕ್ರೋಶ

ಹೆಲ್ಮೆಟ್ ಧರಿಸಿಲ್ಲವೆಂದು 8 ವರ್ಷದ ಪುತ್ರಿಯ ಮುಂದೆಯೇ ಪೊಲೀಸ್ ಅಧಿಕಾರಿಯಿಂದ ವ್ಯಕ್ತಿಗೆ ಕಪಾಳಮೋಕ್ಷ: ನೆಟ್ಟಿಗರಿಂದ ಆಕ್ರೋಶ

ಹೈದರಾಬಾದ್​: ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕ ವ್ಯಕ್ತಿಯೋರ್ವರ ಮೇಲೆ ಆತನ 8ವರ್ಷದ ಪುತ್ರಿಯ ಮುಂಭಾಗವೇ ಪೊಲೀಸ್​ ಅಧಿಕಾರಿಯೋರ್ವರು ಕಪಾಳಕ್ಕೆ ಹೊಡೆದಿರುವ ಘಟನೆ ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯಲ್ಲಿ ‌ನಡೆದಿದೆ. ಇದೀಗ ಇದರ ವೀಡಿಯೋ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ಈ ಘಟನೆ ಭಾನುವಾರ ನಡೆದಿದೆ. 8 ವರ್ಷದ ತಮ್ಮ ಪುತ್ರಿಯನ್ನು ಅಪ್ಪಿಹಿಡಿದು ವ್ಯಕ್ತಿಯು ಪೊಲೀಸ್​ ಅಧಿಕಾರಿಯ ಜತೆ ವಾಗ್ವಾದ ಮಾಡುತ್ತಿರುವ ದೃಶ್ಯ ವೈರಲ್​ ಆಗಿರುವ ವಿಡಿಯೋದಲ್ಲಿದೆ.

"ಹೆಲ್ಮೆಟ್​ ಧರಿಸಿಲ್ಲ ಎಂಬ ಕಾರಣಕ್ಕೆ ಸಬ್​ ಇನ್ಸ್​ಪೆಕ್ಟರ್​ ನನ್ನ ಕಪಾಳಕ್ಕೆ ಬಾರಿಸಿದ್ದಾರೆಂದು ಹಿರಿಯ ಪೊಲೀಸ್​ ಅಧಿಕಾರಿಯ ಮುಂದೆ ಸಂತ್ರಸ್ತ ವ್ಯಕ್ತಿ ಅಳಲು ತೋಡಿಕೊಂಡಿದ್ದಾನೆ. ಆದರೆ, ಹೊಡೆದಿದ್ದಾರೆ ಎನ್ನುವುದಕ್ಕೆ  ವೀಡಿಯೋದಲ್ಲಿ ಯಾವುದೇ ಆಧಾರವಿಲ್ಲ. ಮಗಳೊಂದಿಗೆ ಶ್ರೀನಿವಾಸ್​ ಎಂಬ ವ್ಯಕ್ತಿ ತರಕಾರಿ ತರಲೆಂದು ಹೊರಗಡೆ ಹೋಗಿದ್ದರು. ಆಗ ಸಬ್​ ಇನ್ಸ್​ಪೆಕ್ಟರ್​ ಮುನಿರುಲ್ಲಾ ಎಂಬವರು ಅವರನ್ನು ತಡೆದು ನಿಲ್ಲಿಸಿ ಹೆಲ್ಮೆಟ್​ ಧರಿಸಿಲ್ಲ ಎಂದು ಕಪಾಳಕ್ಕೆ ಬಾರಿಸಿದ್ದಾರೆ. "ಬೇಕಾದರೆ ನೀವು ನನಗೆ ದಂಡ ವಿಧಿಸಿ ಆದರೆ, ನನ್ನ ಮೇಲೆ ಏಕೆ ನೀವು ಕೈ ಮಾಡುತ್ತೀರಾ" ಎಂದು ಶ್ರೀನಿವಾಸ್​ ಅವರು ಎಸ್​ಐ ಮುನಿರುಲ್ಲಾರನ್ನು ಪ್ರಶ್ನಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ. 

ತಂದೆಗೆ ಹೊಡೆದಿರುವುದನ್ನು ನೋಡಿ ಅವರ 8ವರ್ಷದ ಪುತ್ರಿ ವಿಚಲಿತಗೊಂಡಿರುವಂತೆ ವಿಡಿಯೋದಲ್ಲಿ ಕಾಣುತ್ತದೆ. ಆಗ ಸಂತ್ರಸ್ತ ತಂದೆ ಪುತ್ರಿಯನ್ನು ಸಮಾಧಾನ ಮಾಡಿ "ನಾವೇನು ತಪ್ಪು ಮಾಡಿಲ್ಲ, ಯೋಚನೆ ಮಾಡಬೇಡ ಮಗಳೇ" ಎಂದು ಶ್ರೀನಿವಾಸ್​ ಸಮಾಧಾನ ಪಡಿಸುವ ಮಾತುಗಳು ಸಹ ವಿಡಿಯೋದಲ್ಲಿ ದಾಖಲಾಗಿದೆ.

ಶ್ರೀನಿವಾಸ್​ ಅವರು ಎಸ್ಐ ಮುನಿರುಲ್ಲಾರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಜಿಲ್ಲಾ ಪೊಲೀಸ್ ಉಸ್ತುವಾರಿ ಕೋಟಿ ರೆಡ್ಡಿ ತಿಳಿಸಿದ್ದಾರೆ. ಆದರೆ, ಸಂತ್ರಸ್ತನ ಮಗಳ ಹೇಳಿಕೆಯು ಸಹ ವೀಡಿಯೋದಲ್ಲಿ ರೆಕಾರ್ಡ್​ ಆಗಿದ್ದು, "ಹೆಲ್ಮೆಟ್​ ಹಾಕಿಲ್ಲ ಎಂದು ನಮ್ಮನ್ನು ತಡೆದು ನಿಂದಿಸಿದ್ದಾರೆ. ಅಲ್ಲದೆ, ಬೈಕ್​ ಕೀಯನ್ನು ಕಿತ್ತುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿ ಪ್ರತಿಭಟಿಸಿದಾಗ ನನ್ನ ತಂದೆಯ ಮೇಲೆ ಎಸ್​ಐ ಕೈ ಮಾಡಿದ್ದಾರೆ" ಎಂದು ಬಾಲಕಿ ಹೇಳಿದ್ದಾಳೆ. 

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗಳು ವ್ಯಕ್ತವಾಗಿವೆ. ಪೊಲೀಸರ ದುರಹಂಕಾರ ಮಿತಿಮೀರಿವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದನ್ನು ಕೋವಿಡ್-ಪ್ರೇರಿತ ಲಾಕ್‌ಡೌನ್‌ನ ಆರಂಭಿಕ ದಿನಗಳಿಗೆ ಹೋಲಿಸಿದ್ದು, ಪೊಲೀಸರು ನಿಯಮಗಳನ್ನು ಜಾರಿಗೊಳಿಸುವ ಉತ್ಸಾಹದಲ್ಲಿ ನಾಗರಿಕರ ವಿರುದ್ಧ ವಿವೇಚನಾರಹಿತವಾಗಿ, ಹಿಂಸಾತ್ಮಕವಾಗಿ ವರ್ತಿಸಿದ್ದಾರೆಂದು ದೂರಿದ್ದಾರೆ.

Ads on article

Advertise in articles 1

advertising articles 2

Advertise under the article