-->

ಅರ್ಚನಾ ಹತ್ಯೆಗೆ 3ನೇ ಪತಿಯೊಂದಿಗೆ ಪುತ್ರಿಯ ಅಕ್ರಮ ಸಂಬಂಧವೇ ಕಾರಣ: ಪೊಲೀಸ್ ತನಿಖೆಯಿಂದ ಕೊಲೆಗೆ ನಡೆದ ಒಂದು ತಿಂಗಳ ಸಂಚೂ ಬಯಲು

ಅರ್ಚನಾ ಹತ್ಯೆಗೆ 3ನೇ ಪತಿಯೊಂದಿಗೆ ಪುತ್ರಿಯ ಅಕ್ರಮ ಸಂಬಂಧವೇ ಕಾರಣ: ಪೊಲೀಸ್ ತನಿಖೆಯಿಂದ ಕೊಲೆಗೆ ನಡೆದ ಒಂದು ತಿಂಗಳ ಸಂಚೂ ಬಯಲು

                             ಅರ್ಚನಾ ರೆಡ್ಡಿ

ಬೆಂಗಳೂರು: ನಗರದ ಹೊಸೂರು ರಸ್ತೆಯ ಜಂಕ್ಷನ್​ನಲ್ಲಿ ಡಿ.27ರಂದು ನಡೆದಿದ್ದ ಅರ್ಚನಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿದಷ್ಟು ಮತ್ತಷ್ಟು ಸತ್ಯಗಳು ಹೊರ ಬರುತ್ತಿವೆ. ಇದೀಗ ಅರ್ಚನಾ ರೆಡ್ಡಿ ಕೊಲೆಗೆ ಮೊದಲು ಸಂಚು ರೂಪಿಸಿದ್ದೇ ಆಕೆಯ ಮಗಳು ಯುವಿಕಾ ರೆಡ್ಡಿಯೇ ಎಂಬ ಸ್ಪೋಟಕ ಮಾಹಿತಿ ಹೊರಬಂದಿದೆ. 

ಈ ಮೂಲಕ ಅರ್ಚನಾಳ 3ನೇ ಪತಿ, ಜಿಮ್ ಟ್ರೈನರ್ ಆಗಿದ್ದ ನವೀನ್​ ಕುಮಾರ್ ನೊಂದಿಗೆ ಯುವಿಕಾ ರೆಡ್ಡಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿಷಯವೂ ಬಯಲಾಗಿದೆ. ಆದರೆ ಮಲತಂದೆಯಾದ ತಾನು ಯುವಿಕಾ ರೆಡ್ಡಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವನ್ನು ಬಚ್ಚಿಟ್ಟು ನವೀನ್​ ತನ್ನ ಸ್ನೇಹಿತರ ಬಳಿ ಬೇರೆಯೇ ಕಥೆ ಕಟ್ಟಿ ಅವರನ್ನು ಅರ್ಚನಾ ರೆಡ್ಡಿ ಕೊಲೆಗೆ ಪ್ರಚೋದಿಸಿದ್ದ. ಈ ಕೊಲೆಗೆ ಬರೋಬ್ಬರಿ ಒಂದೂವರೆ ತಿಂಗಳ ಕಾಲ ಸ್ಕೆಚ್​ ಹಾಕಲಾಗಿತ್ತು ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ. 

ಕೌಟುಂಬಿಕ ಕಲಹದಿಂದ ಮೊದಲ ಪತಿಯಿಂದ ವಿಚ್ಛೇದನ ಪಡೆದ ಅರ್ಚನಾ ರೆಡ್ಡಿ, ಪುತ್ರ ಹಾಗೂ ಪುತ್ರಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಆ ಬಳಿಕ ಸಿದ್ದಿಕ್​ ಎಂಬಾತನೊಂದಿಗೆ ಸ್ನೇಹ ಬೆಳೆಸಿಕೊಂಡ ಅರ್ಚನಾ ಆತನೊಂಯ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದು, ಆತನೊಂದಿಗೆ ವಾಸಿಸತೊಡಗಿದ್ದಳು. ಆದರೆ ಆತನೊಂದಿಗೂ ಕಿರಿಕ್​ ಆಗಿ ಬಳಿಕ ದೂರವಾಗಿದ್ದಳು.

                              ಯುವಿಕಾ ರೆಡ್ಡಿ

2014ರಲ್ಲಿ ಅರ್ಚನಾಗೆ ಬೇಗೂರು ನಿವಾಸಿ ಜಿಮ್ ಟ್ರೈನರ್ ನವೀನ್ ಕುಮಾರ್ ಎಂಬಾತನ ಪರಿಚಯವಾಗಿದೆ. ಈತ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಪ್ರಾಪರ್ಟಿ ಲಿಟಿಗೇಷನ್ ವಿಚಾರದಲ್ಲಿ ಅರ್ಚನಾಗೆ​ ಸಹಾಯವನ್ನು ಮಾಡುತ್ತಿದ್ದ. ಕೊಂಚ ಕಾಲದ ಬಳಿಕ ಇವರಿಬ್ಬರ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿತ್ತು. 2017ರಲ್ಲಿ ಅರ್ಚನಾಳನ್ನು ನವೀನ್ ವಿವಾಹವಾಗಿದ್ದ. 2019ರಲ್ಲಿ ಇವರಿಬ್ಬರ ಮಧ್ಯೆ ಸಣ್ಣ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಆಗ ಅರ್ಚನಾ ರೆಡ್ಡಿ ಮಗಳು ಯುವಿಕಾ ರೆಡ್ಡಿಯೊಂದಿಗೆ ನವೀನ್​ ಕುಮಾರ್ ಸಲುಗೆ ಬೆಳೆಸಿಕೊಂಡಿದ್ದ. 

ಮಗಳು ಯುವಿಕಾ ರೆಡ್ಡಿಗೂ ನವೀನ್​ ಗೂ ಅಕ್ರಮ ಸಂಬಂಧವಿದೆಯೆಂಬುದು 2021ರಲ್ಲಿ ಅರ್ಚನಾಗೆ ತಿಳಿದು ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನವೀನ್ ಹಾಗೂ ಯುವಿಕಾಗೆ ಅರ್ಚನಾ ವಾರ್ನ್​ ಕೂಡಾ ಮಾಡಿದ್ದಳಂತೆ. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದೆ ಇಬ್ಬರೂ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇದೇ ವಿಚಾರಕ್ಕೆ ಜಗಳವಾಗಿ ನವೀನ್ ಹಾಗೂ ಯುವಿಕಾಳನ್ನು ಅರ್ಚನಾ ಮನೆಯಿಂದ ಹೊರ ಹಾಕಿದ್ದಳಂತೆ. 

ಬಳಿಕ ಇವರಿಬ್ಬರೂ ಬಾಡಿಗೆ ಮನೆಯಲ್ಲಿ ಜೊತೆಯಾಗಿ ವಾಸಿಸಲು ತೊಡಗಿದ್ದಾರೆ. ಮಗಳ ವಿಚಾರದಲ್ಲಿ ಗರಂ ಆದ ಅರ್ಚನಾ, ಇತ್ತೀಚಿಗೆ ರೌಡಿಯೊಬ್ಬನ ಮೂಲಕ ನವೀನ್​ಗೆ ಬೆದರಿಕೆಯನ್ನೊಡ್ಡಿ, ಮಗಳನ್ನು ವಾಪಸ್​ ಕಳುಹಿಸುವಂತೆ ಎಚ್ಚರಿಸಿದ್ದಳು. ಆದರೆ ಆತ ಯುವಿಕಾ ರೆಡ್ಡಿಯನ್ನು ವಾಪಸ್ ಕಳುಹಿಸಿರಲಿಲ್ಲ. ಇತ್ತ ಐಷಾರಾಮಿ ಜೀವನಕ್ಕೆ ಒಗ್ಗಿ ಹೋಗಿದ್ದ ನವೀನ್ ಮತ್ತು ಯುವಿಕಾ ರೆಡ್ಡಿಗೆ ಅರ್ಚನಾ ಹೆಸರಲ್ಲಿದ್ದ ಆಸ್ತಿ ಮೇಲೆ ಕಣ್ಣು ಬಿದ್ದಿತ್ತು.

                                 ನವೀನ್ 

ಅರ್ಚನಾ ರೆಡ್ಡಿ ಹತ್ಯೆಯಾದಲ್ಲಿ ಆಸ್ತಿ ಎಲ್ಲವೂ ತನ್ನ ಪಾಲಾಗುತ್ತದೆ ಎಂದು ಮಗಳು ಪ್ಲ್ಯಾನ್ ಮಾಡಿದ್ದಳು. ಹಾಗಾಗಿ ಮೊದಲು ಕೊಲೆಗೆ ಸಂಚು ರೂಪಿಸಿದ್ದೇ ಅರ್ಚನಾ ಮಗಳು ಯುವಿಕಾ ರೆಡ್ಡಿ ಎಂಬ ವಿಚಾರ ಬಯಲಾಗಿದೆ. ಅದರಂತೆ ನವೀನ್​ ತನ್ನ ಸ್ನೇಹಿತರ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಾನೆ. ಈ ಕೊಲೆಗೆ ಒಂದೂವರೆ ತಿಂಗಳಿನಿಂದ ಸಂಚು ರೂಪಿಸಲಾಗಿತ್ತು. ಆದರೆ ಇದಕ್ಕಾಗಿ ಸ್ನೇಹಿತರೊಂದಿಗೆ ನವೀನ್ ಹೇಳಿದ್ದ ಕತೆಯೇ ಬೇರೆಯಾಗಿತ್ತು. 'ತಾನು ಅರ್ಚನಾಗೆ ಇಷ್ಟೆಲ್ಲಾ ಸಹಾಯ ಮಾಡಿದ್ದೆ. ಆದರೆ ಆಕೆ ತನ್ನನ್ನೇ ಮನೆಯಿಂದ ಹೊರ ಹಾಕಿದ್ದಾಳೆ' ಎಂದು ಕಣ್ಣೀರಿನ ಕತೆ ಕಟ್ಟಿದ್ದ. ಆದರೆ ಎಲ್ಲೂ ತನ್ನ ಸ್ನೇಹಿತರಿಗೆ ಯುವಿಕಾ ರೆಡ್ಡಿಯೊಂದಿಗಿನ ಅಕ್ರಮ ಸಂಬಂಧದ ಬಗ್ಗೆ, ಆಕೆಯೂ ತಾನೂ ಜೊತೆಗಿರುವ ಬಗ್ಗೆ ನವೀನ್ ಎಲ್ಲೂ ಬಾಯಿ ಬಿಟ್ಟಿರಲಿಲ್ಲ. 

ಜಿಗಣಿಯಿಂದ ಬೇರೆಕಡೆಗೆ ಮನೆ ಬದಲಿಸಿದ್ದ ಅರ್ಚನಾ ರೆಡ್ಡಿ ಎಲ್ಲಿ ವಾಸವಿದ್ದಾಳೆಂಬುದು ಯುವಿಕಾ ಮತ್ತು ನವೀನ್​ಗೆ ತಿಳಿದಿರಲಿಲ್ಲ. ಹಾಗಾಗಿ ಅರ್ಚನಾ ಕಾರು ಫಾಲೋ ಮಾಡುವಂತೆ ನವೀನ್​ ತನ್ನ ಸ್ನೇಹಿತರಿಗೆ ಹೇಳಿ ಯಾವುದಾದರೊಂದು ಸಿಗ್ನಲ್ ಬಳಿಯೇ ಹತ್ಯೆ ಮಾಡುವಂತೆ ಸೂಚಿಸಿದ್ದ. ಡಿ.27ರ ರಾತ್ರಿ ಜಿಗಣಿಯಿಂದ ಹೊರಟ ಅರ್ಚನಾಳ ಕಾರು, ಮೊದಲ ಎರಡು ಸಿಗ್ನಲ್ 2 ಸೆಕೆಂಡ್ ಮಾತ್ರ ಇದ್ದಿದ್ರಿಂದ ಅಲ್ಲಿ ನಿಂತಿರಲಿಲ್ಲ. ಹೊಸೂರು ರೋಡ್ ಜಂಕ್ಷನ್ ಸಿಗ್ನಲ್​ನಲ್ಲಿ ಕಾರು ನಿಂತ ತಕ್ಷಣ ಡಿಯೋ ಬೈಕ್ ತಂದು ಅರ್ಚನಾ ಕಾರಿಗೆ ನವೀನ್​ ಸ್ನೇಹಿತ ಅನೂಪ್ ಅಡ್ಡ ಮಲಗಿಸಿದ್ದಾನೆ. ಅಷ್ಟೇ ಅಲ್ಲ ನೋಡು ನೋಡುತ್ತಿದ್ದಂತೆ ಕಾರಿನ ಚಕ್ರವನ್ನ ಮಚ್ಚಿನಿಂದ ಹೊಡೆದು ಪಂಚರ್ ಮಾಡಿದ್ದಾನೆ. ಆಗ ಕಾರಿನಲ್ಲಿದ್ದ ಅರ್ಚನಾಳ ಪುತ್ರ ಸೇರಿ ಇಬ್ಬರು ಹುಡುಗರು ಹಾಗೂ ಡ್ರೈವರ್ ಓಡಿ ಹೋಗಿದ್ದಾರೆ. ಹಂತಕರು ಅರ್ಚನಾಳನ್ನು ಕಾರಿನಿಂದ ಕೆಳಕ್ಕೆ ಎಳೆದು ಮಾರ್ಗ ಮಧ್ಯೆಯೇ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಕೇವಲ 22 ಸೆಕೆಂಡ್​ನಲ್ಲಿ ಅರ್ಚನಾ ಕಥೆಯನ್ನು ಮುಗಿಸಿಬಿಟ್ಟಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚನಾಳ 3ನೇ ಪತಿ ನವೀನ್​ಕುಮಾರ್​, ಪುತ್ರಿ ಯುವಿಕಾ ರೆಡ್ಡಿ ಮತ್ತು ನವೀನ್​ ಸ್ನೇಹಿತರಾದ ಸಂತೋಷ್​, ಅನೂಪ್​, ಆನಂದ್​, ನರೇಂದ್ರ ಮತ್ತು ದೀಪು ಎಂಬುವರನ್ನು ಬಂಧಿಸಲಾಗಿದೆ. ಅರ್ಚನಾಳ ಆಸ್ತಿ ಕಬಳಿಸಿ ವಿಲಾಸಿ ಜೀವನ ನಡೆಸಲೆಂದು ನಡುರಸ್ತೆಯಲ್ಲಿ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ನವೀನ್​ ತಪ್ಪೊಪ್ಪಿಕೊಂಡಿದ್ದಾನೆ. ಇದಕ್ಕೆ ಆಕೆಯ ಪುತ್ರಿ ಯುವಿಕಾ ಸಾಥ್​ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್​ ಜೋಶಿ ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article