-->
ಮಹಿಳೆಯರ ಮದುವೆಯ ವಯಸ್ಸು 21ಕ್ಕೆ ಏರಿಕೆಗೆ ಕೇಂದ್ರ ಸಚಿವ ಸಂಪುಟ ಅಸ್ತು: 43 ವರ್ಷಗಳ ಬಳಿಕ ವಯಸ್ಸಿನ ಮಿತಿಯಲ್ಲಿ ಬದಲಾವಣೆ

ಮಹಿಳೆಯರ ಮದುವೆಯ ವಯಸ್ಸು 21ಕ್ಕೆ ಏರಿಕೆಗೆ ಕೇಂದ್ರ ಸಚಿವ ಸಂಪುಟ ಅಸ್ತು: 43 ವರ್ಷಗಳ ಬಳಿಕ ವಯಸ್ಸಿನ ಮಿತಿಯಲ್ಲಿ ಬದಲಾವಣೆ

ನವದೆಹಲಿ: ಭಾರತದಲ್ಲಿ ವಿವಾಹವಾಗಲು ಇಂತಿಷ್ಟೇ ವಯಸ್ಸಾಗಿರಬೇಕೆಂದು ಕಾನೂನು ಇದೆ. ಅಂದರೆ ವಿವಾಹವಾಹಲು ಮಹಿಳೆಯರಿಗೆ 18 ಹಾಗೂ ಪುರುಷರಿಗೆ 21 ವಯಸ್ಸಾಗಿರಬೇಕು.

ಇದೀಗ ಕೇಂದ್ರ ಸರಕಾರ ಮಹಿಳೆಯರ ವಿವಾಹವಾಗುವ ವಯಸ್ಸನ್ನು 21ಕ್ಕೆ ಏರಿಸಿದೆ. ಮದುವೆಯಾಗುವ ವಯಸ್ಸನ್ನು ಏರಿಕೆ ಮಾಡಿರುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯೂ ದೊರಕಿದೆ. ಇದೀಗ ಶೀಘ್ರದಲ್ಲಿಯೇ ಕಾನೂನು ರೂಪದಲ್ಲಿ ಜಾರಿಗೆ ಬರಲಿದೆ. 

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ದೇಶದಲ್ಲಿನ ಬಾಣಂತಿ ಹಾಗೂ ಶಿಶು ಮರಣಗಳ ಪ್ರಮಾಣವನ್ನು ತಗ್ಗಿಸಲು, ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಮಹಿಳೆಯರ ಮದುವೆಯ ವಯಸ್ಸನ್ನು ಏರಿಕೆ ಮಾಡಬೇಕು ಎಂದಿದ್ದರು. ಮಹಿಳೆಯರ ಮದುವೆಯ ವಯಸ್ಸಿನ ಮಿತಿಯ ಹೆಚ್ಚಳದಿಂದ ಸಹಜವಾಗಿಯೇ ತಾಯ್ತನದ ವಯಸ್ಸಿನ ಮಿತಿಯೂ ಏರುತ್ತದೆ ಎಂದಿದ್ದರು. 

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸಿನ ಹೆಚ್ಚಳದಿಂದ  ತಾಯಿಯ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲು ಆರು ತಿಂಗಳುಗಳ ಕಾಲ ಸಮಯ ನಿಗದಿಗೊಳಿಸಲಾಗಿತ್ತು. ಇದಕ್ಕೊಂದು ಕಾರ್ಯಪಡೆಯನ್ನು ರಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕಳೆದ ವರ್ಷ ಘೋಷಿಸಿದ್ದರು. ವಿವಾಹದ ವಯಸ್ಸನ್ನು 21 ವರ್ಷಕ್ಕೆ ಏರಿಕೆ ಮಾಡಿದರೆ, ಆಗುವ ಸಾಧಕ ಬಾಧಕಗಳ ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ಒಂದು ಕಾರ್ಯಪಡೆಯನ್ನು (ಟಾಸ್ಕ್​ಫೋರ್ಸ್) ರಚಿಸಿತ್ತು. 

ಸಮತಾ ಪಕ್ಷದ ಮಾಜಿ ಸದಸ್ಯೆ ಜಯಾ ಜೇಟ್ಲಿ ಇದರ ನೇತೃತ್ವ ವಹಿಸಿದ್ದರು. ನೀತಿ ಆಯೋಗದ ಡಾ.ವಿ.ಕೆ.ಪೌಲ್​, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ , ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಕಾನೂನು ಇಲಾಖೆಯ ಸಿಬ್ಬಂದಿ ಕೂಡ ಈ ಕಾರ್ಯಪಡೆಯಲ್ಲಿ ಇದ್ದರು. ಹಲವಾರು ತಜ್ಞರ ಜತೆಗೆ ಹಾಗೂ ಯುವ ಮಹಿಳೆಯರೊಂದಿಗೆ ಆಳವಾಗಿ ಚರ್ಚಿಸಿದ ಬಳಿಕ‌ ಇದೀಗ ಮದುವೆ ವಯಸ್ಸಿನ ಮಿತಿಯ ಏರಿಕೆಗೆ ಶಿಫಾರಸು ಮಾಡಲಾಗಿದೆ. ಕಾರ್ಯಪಡೆಯ ಶಿಫಾರಸಿನ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ. 

ಇದೀಗ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಕ್ಕೆ ತಿದ್ದುಪಡಿ ತರಲಾಗುತ್ತದೆ. ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆ, 1955 ರಂತಹ ವೈಯಕ್ತಿಕ ಕಾನೂನುಗಳಿಗೂ ತಿದ್ದುಪಡಿ ತರಲಾಗುವುದು. ಮಹಿಳೆಯರ ಮದುವೆಯ ವಯಸ್ಸನ್ನು ಹೆಚ್ಚಿಸಿದ ಪ್ರಸ್ತಾವ ಜುಲೈ 31ರೊಳಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ. ನಂತರ ಇದು ಕಾನೂನು ರೂಪ ಪಡೆಯಲಿದೆ. 

1949ರಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 15ಕ್ಕೆ ಏರಿಸಲಾಗಿತ್ತು. 1978ರಲ್ಲಿ ಇದನ್ನು 18ಕ್ಕೆ ಏರಿಸಲಾಗಿತ್ತು. ಇದೀಗ 43 ವರ್ಷಗಳ ಬಳಿಕ ವಯಸ್ಸನ್ನು ಏರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Ads on article

Advertise in articles 1

advertising articles 2

Advertise under the article

holige copy 1.jpg