ಭಾರತ ಸೇರಿದಂತೆ ಇತರ ದೇಶಗಳ 18 ಸುಂದರಿಯರಿಗೆ ಕೊರೊನಾ ಸೋಂಕು ದೃಢ: ವಿಶ್ವ ಸುಂದರಿ ಸ್ಪರ್ಧೆ ಮುಂದೂಡಿಕೆ

ನವದೆಹಲಿ: ಮೊನ್ನೆಯಷ್ಟೇ ಮಿಸ್‌ ಯೂನಿವರ್ಸ್‌ ಸ್ಪರ್ಧೆ ಸಂಪನ್ನಗೊಂಡಿದ್ದು, ಭಾರತದ ಕುವರಿ ಹರ್ನಾಜ್ ಸಂಧು ಭುವನ ಸುಂದರಿಯಾಗಿ ಕಿರೀಟ ಮುಡಿಗೇರಿಸಿದ್ದಾರೆ.‌ ಈ ಸಂತಸದ ನಡುವೆಯೇ ವಿಶ್ವ ಸುಂದರಿ-2021ರ (ಮಿಸ್‌ ವರ್ಲ್ಡ್‌) ಸ್ಪರ್ಧೆಗೂ ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ ಭಾರತದ ಸುಂದರಿಯೂ ಸೇರಿದಂತೆ ವಿವಿಧ ದೇಶಗಳ ಸುಂದರಿಯರಿಗೆ ಕೊರೊನಾ ಸೋಂಕು ದೃಢಗೊಂಡಿರುವ ಹಿನ್ನೆಲೆಯಲ್ಲಿ ಸ್ಪರ್ಧೆಯನ್ನು ಮುಂದೂಡಲಾಗಿದೆ.

ಭಾರತದಿಂದ ಆಯ್ಕೆಯಾಗಿರುವ ಹೈದರಾಬಾದ್‌ನ ಮಾನಸಾ ವಾರಣಾಸಿಯವರು ಕೊರೊನಾ ಪಾಸಿಟಿವ್ ಆಗಿದ್ದಾರೆ. ಅಲ್ಲದೆ ಇತರ ದೇಶಗಳ ಒಟ್ಟು 17 ಸುಂದರಿಯರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇದೀಗ ಸ್ಪರ್ಧೆಯನ್ನು ಮುಂದೂಡಲಾಗಿದೆ.

ಸೋಂಕಿತ ಸುಂದಿರಿಯರು ಸದ್ಯ ಪೋರ್ಟೊ ರಿಕೊದಲ್ಲಿ ಐಸೊಲೇಷನ್‌ ಗೆ ಒಳಗಾಗಿದ್ದಾರೆ. ಇತರ ಸ್ಪರ್ಧಿಗಳು, ಸ್ಪರ್ಧೆಗೆ ಆಗಮಿಸುವವರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಿಸ್‌ ವರ್ಲ್ಡ್‌ ಅಂತಿಮ ಸುತ್ತಿನ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸೋಂಕಿತ ಸ್ಪರ್ಧಿಗಳೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ಮೂರು ತಿಂಗಳ ಒಳಗೆ ಫೈನಲ್ ಸ್ಪರ್ಧೆ ನಡೆಯಲಿದೆ. ಅಲ್ಲಿಯವರೆಗೆ ಎಲ್ಲಾ ಸೋಂಕಿತ ಸುಂದರಿಯರು ಗುಣಮುಖರಾಗುವ ಸಾಧ್ಯತೆ ಇದೆ ಎಂದು ಮಿಸ್‌ ವರ್ಲ್ಡ್‌ ಸಂಸ್ಥೆ ತಿಳಿಸಿದೆ. 

ಈ ಕುರಿತು ಮಾಹಿತಿ ನೀಡಿರುವ ಭಾರತದ ಮಿಸ್‌ ಇಂಡಿಯಾ ಸಂಸ್ಥೆಯು, ಮಾನಸಾ ವಾರಣಾಸಿ ಈ ಸ್ಪರ್ಧೆಗಾಗಿ ಸಾಕಷ್ಟು ತಯಾರಿ ನಡೆಸಿದ್ದಾರೆ. ಊಟ, ನಿದ್ದೆ ತೊರೆದಿದ್ದಾರೆ. ಬಹಳ ಕಷ್ಟಪಟ್ಟು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಈ ಸಮಯದಲ್ಲಿಯೇ ಸೋಂಕು ತಗುಲಿರುವುದು ಬೇಸರ ತಂದಿದೆ. ಆದರೆ ಆದಷ್ಟು ಶೀಘ್ರ ಅವರು ಗುಣಮುಖರಾಗಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದಿದ್ದಾರೆ.