
ಉದ್ಯೋಗದಾತನ ಪುತ್ರನನ್ನೇ ಕೊಂದು ಮೂಟೆ ಕಟ್ಟಿ ಕಾಲುವೆಗೆಸೆದ ಪಾಪಿ ಸಹೋದರರು: ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಹೋಗಿ ಅಮಾಯಕನ ಕೊಲೆ
11/05/2021 08:59:00 PM
ಬೆಂಗಳೂರು: ರಾಜ್ಯ ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿ ಎರಡು ದಿನಗಳ ಹಿಂದೆ ಮೂಟೆಯಲ್ಲಿ ಕಂಡು ಬಂದಿದ್ದ ವಿದ್ಯಾರ್ಥಿ ತರುಣ್ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತರುಣ್(20) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಸಿರ್ ಹಾಗೂ ಸೈಯದ್ ತಜ್ಮುಲ್ ಎಂಬ ಸಹೋದರರೀರ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಬ್ಬರೂ ಮೃತ ತರುಣ್ ತಂದೆಯೊಂದಿಗೆ ಕೆಲಸ ಮಾಡುತ್ತಿದ್ದು, ತರುಣ್ ಗೆ ಗೆಳೆಯರಾಗಿದ್ದವರು.
ಭಾರತೀನಗರ ಮುರುಗ ಪಿಳ್ಳೈ ನಿವಾಸಿ ತರುಣ್ ನ. 1ರಂದು ತನ್ನ ತಂದೆ ಮಣಿಯವರಿಂದ 2 ಸಾವಿರ ರೂ. ಪಡೆದುಕೊಂಡು ಪಟಾಕಿ ತರುವುದಾಗಿ ಹೇಳಿ ಹೊರ ಹೋಗಿದ್ದರು. ಆದರೆ ರಾತ್ರಿಯಾದರೂ ಅವರು ಮರಳದಿರುವ ಹಿನ್ನೆಲೆಯಲ್ಲಿ ಭಾರತೀನಗರ ಪೊಲೀಸರಿಗೆ ಮಣಿಯವರು ನಾಪತ್ತೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಮಂಗಳವಾರ ರಾಜರಾಜೇಶ್ವರಿ ನಗರ ರಾಜಾಕಾಲುವೆ ಬಳಿ ಕಂಡುಬಂದ ಮೂಟೆಯಲ್ಲಿ ಅಪರಿಚಿತ ಶವ ಇರುವುದು ತಿಳಿದುಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರಿಗೆ ಅದು ತರುಣ್ ಮೃತದೇಹ ಎಂಬುದು ದೃಢಪಟ್ಟಿತ್ತು.
ತರುಣ್ ಬಾಯಿಗೆ ಟೇಪ್ ಅಂಟಿಸಿ, ಕೈಕಾಲುಗಳನ್ನು ಕಟ್ಟಿ, ಉಸಿರುಗಟ್ಟಿಸಿ ಕೊಂದು ಮೂಟೆಯೊಳಗೆ ತುಂಬಿಸಿ ಕಾಲುವೆಗೆ ಎಸೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಗೈದ ಇಬ್ಬರು ಸಹೋದರರಾಗಿದ್ದು, ತರುಣ್ ತಂದೆಯ ಜೊತೆಗೆ ಕೆಲಸ ಮಾಡುತ್ತಿದ್ದವರೇ ಆಗಿದ್ದಾರೆ. ಕೊಲೆಗೈದ ನಾಸಿರ್ ಹಾಗೂ ಸೈಯದ್ ತಜ್ಮುಲ್ ಎಂಬವರು ಮಣಿಯವರೊಂದಿಗೆ ಫ್ರೂಟ್ಸ್ ಕಟಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಮಣಿ ಬಳಿ ಹಣ ಇರುವುದು ತಿಳಿದು ಬ್ಲ್ಯಾಕ್‌ಮೇಲ್ ಮಾಡಿ ಅದನ್ನು ವಸೂಲಿ ಮಾಡಲು ಈ ಕೃತ್ಯ ಎಸಗಿದ್ದರು. ಆದರೆ ತರುಣ್ ತಂದೆ ಪೊಲೀಸರ ಮೊರೆಹೋಗಿದ್ದಕ್ಕೆ ಕಂಗಾಲಾಗಿ ಇವರು ಕೊಲೆ ಮಾಡಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ.