ಹೃದಯಾಘಾತವಾದ ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾಗಲೆ ಡಾಕ್ಟರ್ ಗೆ ಹಾರ್ಟ್ ಅಟ್ಯಾಕ್!

ಕಾಮಾರೆಡ್ಡಿ (ತೆಲಂಗಾಣ) : ಹೃದಯಾಘಾತದ ರೋಗಿಯೋರ್ವರಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ವೈದ್ಯರೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದ ಕಾಮಾರೆಡ್ಡಿ ಎಂಬಲ್ಲಿ ನಡೆದಿದೆ. 

ಹೃದಯ ತಜ್ಞ ಡಾ.ಲಕ್ಷ್ಮಣ್​​ ಎಂಬುವವರು ಹೃದಯಾಘಾತದಿಂದ ಮೃತಪಟ್ಟವರು. 

ಡಾ.ಲಕ್ಷ್ಮಣ್ ಅವರು ಕಾಮಾರೆಡ್ಡಿಯ ಜಿಲ್ಲೆಯ ಗಾಂಧಾರಿ ಮಂಡಲದ ನಿವಾಸಿಯಾಗಿದ್ದಾರೆ‌. ಸರ್ಜು ಎಂಬ ವ್ಯಕ್ತಿಗೆ ಹೃದಯಾಘಾತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅವರ ಜೀವ ಉಳಿಸಲು ಡಾ.ಲಕ್ಷ್ಮಣ್‌ ಚಿಕಿತ್ಸೆ ನೀಡಲು ಪ್ರಯತ್ನ ಪಡುತ್ತಿದ್ದರು. 

ಈ ವೇಳೆ ವಿಚಿತ್ರ ಎಂಬಂತೆ ಡಾ.ಲಕ್ಷ್ಮಣ್ ಅವರಿಗೂ ಹೃದಯಾಘಾತವಾಗಿದೆ. ಏಕಾಏಕಿ ಕುಸಿದುಬಿದ್ದ ಅವರು ಅಲ್ಲಿಯೇ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಚಿಕಿತ್ಸೆ ಪಡೆಯುತ್ತಿದ್ದ ಸರ್ಜುವನ್ನು ಕಾಮಾರೆಡ್ಡಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸದರೂ, ಮಾರ್ಗಮಧ್ಯೆ ಸರ್ಜು ಮೃತಪಟ್ಟಿದ್ದಾರೆ. 

ಇದೀಗ ನಿಜಾಮಾಬಾದ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಡಾ.ಲಕ್ಷ್ಮಣ್‌ ಸಾವಿಗೆ ಇಡೀ ಆಸ್ಪತ್ರೆ ಕಂಬನಿ ಮಿಡಿದಿದೆ.