ಎರಡು ವರ್ಷ ಕತ್ತರಿ ಹಾಕದೆ ಪೋಷಿಸಿದ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ ನಟಿ ಮಾಧುರಿ ದೀಕ್ಷಿತ್ ಪುತ್ರ: ಈತನ ಕಾರ್ಯಕ್ಕೆ ‌ನೆಟ್ಟಿಜನ್ ಫಿದಾ

ಮುಂಬೈ: ಇತ್ತೀಚಿಗೆ ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡುವವರ ಸಂಖ್ಯೆ ಅಧಿಕವಾಗಿದೆ. ಇದೀಗ ಆ ಸಾಲಿಗೆ ನಟಿ ಮಾಧುರಿ ದೀಕ್ಷಿತ್ ಸೇರಿಕೊಂಡಿದ್ದಾನೆ.

ಮಾಧುರಿ ದೀಕ್ಷಿತ್ ಹಾಗೂ ಶ್ರೀರಾಮ್‌ ನೇನೇ ಪುತ್ರ ರಿಯಾನ್‌ ಎರಡು ವರ್ಷಗಳಿಂದ ಕತ್ತರಿಸದೆ ಬೆಳೆಸಿರುವ ಕೂದಲನ್ನು ಕ್ಯಾನ್ಸರ್‌ ಪೀಡಿತರಿಗಾಗಿ ದಾನ ಮಾಡಿದ್ದಾನೆ. ರಿಯಾನ್ ಕಳೆದ ಎರಡು ವರ್ಷಗಳಿಂದ ಪ್ರೀತಿಯಿಂದ ಈ ಕೂದಲನ್ನು ಬೆಳೆಸಿಕೊಂಡಿದ್ದನೆಂದು ಮಾಧುರಿ ಹೇಳಿದ್ದಾರೆ. 

ನ. 7ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವಾಗಿದ್ದು, ಅಂದು ರಿಯಾನ್‌ ತನ್ನ ಕೂದಲನ್ನು ದಾನ ಮಾಡಿದ್ದಾನೆ. ಈ ಕೂದಲನ್ನು ಕ್ಷೌರ ಮಾಡುತ್ತಿರುವ ವೀಡಿಯೋವನ್ನು ಮಾಧುರಿ ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ರಿಯಾನ್ ಕ್ಯಾನ್ಸರ್‌ ಪೀಡಿತರಿಗೆ ದಾನ ಮಾಡಲೆಂದೇ 2 ವರ್ಷಗಳಿಂದ ತಮ್ಮ ತಲೆ ಕೂದಲು ಕತ್ತರಿಸಿಲ್ಲ ಎಂದು ಅವರು ಪೋಸ್ಟ್​ ಮಾಡಿದ್ದಾರೆ.

'ಕೀಮೋ ಥೆರಪಿಗೆ ಒಳಗಾಗಿ ಕೂದಲು ಕಳೆದುಕೊಳ್ಳುತ್ತಿರುವವರ ಬಗ್ಗೆ ರಿಯಾನ್‌ ಸದಾ ಬೇಸರ ವ್ಯಕ್ತ ಪಡಿಸುತ್ತಿದ್ದ. ಅವರಿಗೆ ಸಹಾಯ ಮಾಡಬೇಕೆಂಬ ಹಂಬಲ ಅವನಲ್ಲಿತ್ತು. ಕೊನೆಗೆ ಕೂದಲು ದಾನದ ಬಗ್ಗೆ ಯೋಚಿಸಿದ ಅವನು ಎರಡು ವರ್ಷಗಳಿಂದ ಕೂದಲು ಕತ್ತರಿಸದೆ ಪೋಷಿಸಿದ್ದಾನೆ. ಈ ಬಗ್ಗೆ ಅವನು ಹೇಳಿದಾಗ ನನಗೇ ಅಚ್ಚರಿಯಾಯಿತು. ನಿಜಕ್ಕೂ ನನ್ನ ಮಗ ಇಷ್ಟೊಂದು ಯೋಚನೆ ಮಾಡುತ್ತಾನೆಯೇ ಎಂದೆನಿಸಿತು’ ಎಂದು ಮಾಧುರಿ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ರಿಯಾನ್ ಕಕ್ಕುಲಾತಿ ಬಗ್ಗೆ ನಟಿ ಶಿಲ್ಪಾ ಶೆಟ್ಟಿ, ಸಿನಿಮಾ ನಿರ್ಮಾಪಕಿ ಫರಾ ಖಾನ್ ಸೇರಿದಂತೆ ಚಿತ್ರರಂಗ ಹಲವು ಗಣ್ಯರು ಹಾಗೂ ನೆಟ್ಟಿಗರು ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದು ಇತರರಿಗೂ ಮಾದರಿ ಎಂದಿದ್ದಾರೆ.