ಟ್ರಕ್ ನಿಂದ ಹಾರಿ ರಸ್ತೆಗೆ ತೂರಿ ಬಿದ್ದ ನೋಟುಗಳಿಗೆ ಮುಗಿ ಬಿದ್ದ ಜನರು: ಹಣ ಬಾಚಿ ಕೊಂಡೊಯ್ದವರಿಗೆ ಇದೀಗ ಬಿಗ್ ಶಾಕ್

ವಾಷಿಂಗ್ಟನ್​: ದುಡ್ಡೇ ದೊಡ್ಡಪ್ಪ ಅನ್ನೋ ಗಾದೆಯಂತೆ ಹೆಚ್ಚಿನವರು ಹಣದ ಹಿಂದೆಯೇ ಓಡುತ್ತಿರುವುದನ್ನು ನಾವು ಕಾಣುತ್ತಲೇ ಇರುತ್ತೇವೆ. ಆದರೆ ಹಣವನ್ನು ಯಾರಾದರೂ ಬೀದಿಯಲ್ಲಿ ಹಾರಿ ಬಿಡುತ್ತಾರೆಯೇ ಅಂದರೆ ಯಾರಾದರೂ ಖಂಡಿತ ಇಲ್ಲ ಅನ್ನುತ್ತಾರೆ.

ಯುನೈಟೆಡ್​ ಸ್ಟೇಟ್ಸ್​ನ ದಕ್ಷಿಣ ಕ್ಯಾಲಿಫೋರ್ನಿಯಾದ ಹೆದ್ದಾರಿಯಲ್ಲಿ ಟ್ರಕ್​ ಒಂದರಲ್ಲಿ ಶುಕ್ರವಾರ ಹಣ ಸಾಗಿಸಲಾಗುತ್ತಿತ್ತು. ಸ್ಯಾನ್​ ಡಿಯಾಗೋದಲ್ಲಿರುವ ಫೆಡರಲ್​​ ಡೆಪಾಸಿಟ್​ ಇನ್ಸುರೆನ್ಸ್​ ಕಾರ್ಪ್ ಕಂಪೆನಿಗೆ ಈ ಟ್ರಕ್​ ಹಣ ಕೊಂಡೊಯ್ಯುತ್ತಿತ್ತು.​ ಆದರೆ ಟ್ರಕ್​ ಸಂಚರಿಸುತ್ತಿದ್ದಂತೆ ಒಳಗಿದ್ದ ಅನೇಕ ಬ್ಯಾಗ್​ ಓಪನ್​ ಆಗಿ ಅದರಲ್ಲಿದ್ದ ನೋಟುಗಳು ಹಾರಿ ರಸ್ತೆಗೆ ಬಿದ್ದಿದೆ. 

ಹಣ ರಸ್ತೆಗೆ ಹಾರುತ್ತಿದ್ದಂತೆ ಅಲ್ಲಿದ್ದವರೆಲ್ಲಾ ನೋಟುಗಳನ್ನು ಬಾಚಿಕೊಳ್ಳಲು ಮುಗಿಬಿದ್ದಿದ್ದಾರೆ. ಡೆಮಿ ಬ್ಯಾಗ್ಬಿ ಎಂಬ ಬಾಡಿ ಬಿಲ್ಡರ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಘಟನೆಗೆ ಸಂಬಂಧಿಸಿದ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದು ನಾನು ನೋಡಿರುವ ಅತ್ಯಂತ ಹುಚ್ಚುತನದ ಸಂಗತಿಯಾಗಿದೆ. ಪ್ರತಿಯೊಬ್ಬರೂ ಮುಕ್ತಮಾರ್ಗದಿಂದ ಹಣವನ್ನು ಪಡೆಯಲು ಮುಕ್ತಮಾರ್ಗದಲ್ಲಿ ನಿಲ್ಲಿಸಿದ್ದಾರೆಂದು ಬರೆದುಕೊಂಡಿದ್ದಾರೆ. 

ಇನ್ನು ರಸ್ತೆಗೆ ಬಿದ್ದ ನೋಟುಗಳನ್ನು ಹೆಕ್ಕಿ ಕೊಂಡೊಯ್ದ ಜನರಿಗೆ ಹಣ  ಹಿಂದಿರುಗಿಸುವಂತೆ ಅಧಿಕಾರಿಗಳು ಆಗ್ರಹಿಸಿದ್ದಾರೆ. ಘಟನೆಯಲ್ಲಿ ಎಷ್ಟು ಹಣವನ್ನು ಹಾರಿ ಹೋಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ. ಆದರೆ, ಅನೇಕ ಮಂದಿ ಸಾಕಷ್ಟು ಹಣ ಬಾಚಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟ್ರಕ್​ನ ಒಂದು ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿಯೇ ಇಬ್ಬರನ್ನು‌ ಪೊಲೀಸರು ಬಂಧಿಸಿದ್ದಾರೆ. ಹಣ ಬಾಚಿರುವ ಇತರರು ಕೂಡ ಕ್ರಿಮಿನಲ್​ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಘಟನೆ ಸಂಬಂಧಿಸಿದ ವೀಡಿಯೋ ಆಧಾರದ ಮೇಲೆ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.