ತಿರುವಳ್ಳೂರು: ಮದುವೆಯಾಗಿ ಇನ್ನೇನು ನಾಲ್ಕು ದಿನವಷ್ಟೇ ಆಗಿತ್ತು. ಹೊಸ ಜೀವನದ ಸುಖದ ಸುಪ್ಪತ್ತಿಗೆಯಲ್ಲಿ ತಮ್ಮ ಮುಂದಿನ ಬಾಳಿನ ಸವಿಗನಸು ಕಾಣುತ್ತಿದ್ದ ಈ ಜೋಡಿಯನ್ನು ಕೊಂಡೊಯ್ಯಲು ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಿರುವಿನಲ್ಲಿ ಜವರಾಯ ಕಾಯುತ್ತಿದ್ದ. ಇದೀಗ ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.
ಹೌದು ಅರಕ್ಕೊಣಮ್ ಮೂಲದ ಮನೋಜ್ ಕುಮಾರ್ (31) ಹಾಗೂ ಪೆರುಗಲಥೂರ್ ಮೂಲದ ಕಾರ್ತಿಕಾ (30) ವಿವಾಹವಾಗಿ ಕೇವಲ ನಾಲ್ಕು ದಿನಗಳಷ್ಟೇ ಕಳೆದಿತ್ತು. ಆದರೆ ಈ ನವಜೋಡಿಯೀಗ ಭೀಕರ ರಸ್ತೆ ಅಪಘಾತವೊಂದಕ್ಕೆ ದಾರುಣವಾಗಿ ಬಲಿಯಾಗಿದೆ. ಈ ರಸ್ತೆ ಅಪಘಾತ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಭಾನುವಾರ ನಡೆದಿದ್ದು, ಕಾಂಕ್ರಿಟ್ ಮಿಕ್ಸರ್ ಲಾರಿಯು ಇವರು ಸಂಚರಿಸುತ್ತಿದ್ದ ಕಾರಿನ ಮೇಲೆಯೇ ಬಿದ್ದು ದಂಪತಿಗಳೀರ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮನೋಜ್ ಕುಮಾರ್ ಮೆಡಿಕಲ್ ರೆಪ್ ಆಗಿ ಉದ್ಯೋಗ ಮಾಡುತ್ತಿದ್ದು, ಕಾರ್ತಿಕಾ ಖಾಸಗಿ ಕ್ಲೀನಿಕೊಂದರಲ್ಲಿ ವೈದ್ಯೆ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಕ್ಟೋಬರ್ 28ರಂದು ಇಬ್ಬರಿಬ್ಬರು ವಿವಾಹವಾಗಿದ್ದರು. ಭಾನುವಾರ ದಂಪತಿ ಕಾರ್ತಿಕಾ ಮನೆಗೆ ಹೋಗಿ ಮರಳಿ ಅರಕ್ಕೊಣಮ್ಗೆ ವಾಪಸ್ ಆಗುತ್ತಿದ್ದರು. ಪೂನಮೆಲೀ-ಅರಕ್ಕೊಣಮ್ ಹೆದ್ದಾರಿ ಮಧ್ಯದಲ್ಲಿರುವ ಕಡಂಬಥೂರ್ ಸಮೀಪ ಭಾನುವಾರ ರಾತ್ರಿ 9.45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಇವರು ಸಂಚಾರ ಮಾಡುತ್ತಿದ್ದ ಕಾರು ಪೂನಮೆಲೀ- ಅರಕ್ಕೊಣಮ್ ಹೆದ್ದಾರಿ ಮಧ್ಯದಲ್ಲಿರುವ ಕಡಂಬಥೂರ್ ಸಮೀಪ ಬರುತ್ತಿರುವಾಗ ಎದುರಿನಿಂದ ಬರುತ್ತಿದ್ದ ಕಾಂಕ್ರಿಟ್ ಮಿಕ್ಸರ್ ಲಾರಿಯು ತಿರುವು ಪಡೆಯಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಮಿಕ್ಸರ್ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರೊಳಗಿದ್ದ ಮನೋಜ್ ಕುಮಾರ್ ಹಾಗೂ ಕಾರ್ತಿಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ನಡೆದ ಎರಡು ಗಂಟೆಯ ಬಳಿಕ ಕಾಂಕ್ರೀಟ್ ಮಿಕ್ಸರ್ ಲಾರಿಯನ್ನು ತೆರವುಗೊಳಿಸಲಾಗಿದೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಂಬ್ಯುಲೆನ್ಸ್ ದೌಡಾಯಿಸಿತ್ತು. ಆದರೆ, ಅಷ್ಟರಲ್ಲಾಗಲೇ ದಂಪತಿ ಸಾವಿಗೀಡಾಗಿದ್ದರು. ಮೃತದೇಹಗಳನ್ನು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಬಳಿಕ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ. ಘಟನೆ ನಡೆದ ತಕ್ಷಣ ಮಿಕ್ಸರ್ ಲಾರಿ ಡ್ರೈವರ್ ಎಸ್ಕೇಪ್ ಆಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.