ಮಂಗಳೂರು: ನಗರದ ಬಂಗ್ರ ಕೂಳೂರು ಹಾಗೂ ಕೋಡಿಕಲ್ ನಲ್ಲಿನ ನಾಗಬನದ ನಾಗನಕಲ್ಲನ್ನು ಧ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾವೂರು ಶಾಂತಿನಗರ ನಿವಾಸಿಗಳಾದ ಸಫ್ವಾನ್(25), ಮೊಹಮ್ಮದ್ ಸುಹೈಬ್(23), ನಿಖಿಲೇಶ್(22), ಪಂಜಿಮೊಗರು ನಿವಾಸಿ ಪ್ರವೀಣ್ ಅನಿಲ್ ಮೊಂತೆರೊ(27), ಸುರತ್ಕಲ್ ನಿವಾಸಿ ಜಯಂತ್ ಕುಮಾರ್ (30), ಬಂಟ್ವಾಳ ಪಡೂರು ಗ್ರಾಮದ ಪ್ರತೀಕ್ (24), ಕೂಳೂರು ಪಡುಕೋಡಿ ಗ್ರಾಮದ ಮಂಜುನಾಥ(30), ಹಾಸನ ಜಿಲ್ಲೆಯ ಬೇಳೂರು ಗ್ರಾಮದ ಬೇಳೂರು ಗ್ರಾಮ ಮೂಲದ ನೌಷಾದ್ ಅರೇಹಳ್ಳಿ(30)ಬಂಧಿತ ಆರೋಪಿಗಳು.
ಆರೋಪಿಗಳು ಕೋಮುಗಲಭೆ ಸೃಷ್ಟಿಸಲು, ಸಮಾಜದಲ್ಲಿ ಅಶಾಂತಿ ತಲೆದೋರಬೇಕೆನ್ನುವ ಉದ್ದೇಶದಿಂದ ನಾಗರಕಲ್ಲನ್ನು ಧ್ವಂಸಗೈದಿರುವುದು ತಿಳಿದು ಬಂದಿದೆ. ಆರೋಪಿಗಳು ಈ ಬಗ್ಗೆ ಸಂಚು ರೂಪಿಸಿ ಕೃತ್ಯ ಎಸಗಿರುವುದು ಪೊಲೀಸರಿಗೆ ಪ್ರಾಥಮಿಕ ತನಿಖಾ ಹಂತದಲ್ಲಿ ತಿಳಿದು ಬಂದಿದೆ.
ಸರಗಳವು ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿ ಜಾಮೀನು ಮೂಲಕ ಹೊರ ಬಂದಿರುವ ಇರ್ಷಾದ್ ಹಾಗೂ ಅಚ್ಚಿ ಎಂಬ ಆರೋಪಿಗಳು ಈ ಪ್ರಕರಣದ ಮೂಲ ಸೂತ್ರಧಾರಿಗಳು. ನಗರದಲ್ಲಿ ಕಳವು ಕೃತ್ಯ ಎಸಗಲು ಅಡ್ಡಿಯಾಗುತ್ತಿರುವುದರಿಂದ ಪೊಲೀಸರ ಗಮನವನ್ನು ಬೇರೆಡೆ ಸೆಳೆಯಲು ಸಂಚು ರೂಪಿಸಿದ್ದಾರೆ. ಇದನ್ನು ಅವರು ತಮ್ಮ ಸಹಚರ ಕಾವೂರು ನಿವಾಸಿ ಸಫ್ವಾನ್ ಎಂಬಾತನಿಗೆ ತಿಳಿಸಿದ್ದಾರೆ. ಆದ್ದರಿಂದ ಇವರು ನಾಗನ ಕಲ್ಲು ಧ್ವಂಸಗೈದರೆ ಎಲ್ಲರ ಗಮನ ಅತ್ತ ಬೀರುತ್ತದೆ ಎಂದು ಸಂಚು ರೂಪಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಈ ರೀತಿ ಕೃತ್ಯ ಎಸಗಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ಸಫ್ವಾನ್ ತನ್ನ ಸಹಚರ ಪ್ರವೀಣ್ ಅನಿಲ್ ಮೊಂತೆರೊಗೆ ಈ ವಿಚಾರವನ್ನು ಹೇಳಿದ್ದಾನೆ. ಆತ ಆರೋಪಿಗಳಿಗೆ10 ಸಾವಿರ ರೂ. ಆಮಿಷವೊಡ್ಡಿ ವಿಧ್ವಂಸಕ ಕೃತ್ಯ ಎಸಗಲು ಪ್ರೇರೇಪಿಸಿದ್ದಾನೆ.
ಆರೋಪಿಗಳ ಪತ್ತೆ ಹಚ್ಚಿರುವ ಪೊಲೀಸ್ ತಂಡಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. 25 ಸಾವಿರ ರೂ. ಬಹುಮಾನ ನೀಡಿ ಅಭಿನಂದಿಸಿದ್ದಾರೆ.