-->
🛑 ಮಂಗಳೂರಿನಲ್ಲಿ  8 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ: ಹೀನಕೃತ್ಯ ಎಸಗಿದ ನಾಲ್ವರು ಕಾಮುಕರು ಅಂದರ್

🛑 ಮಂಗಳೂರಿನಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ: ಹೀನಕೃತ್ಯ ಎಸಗಿದ ನಾಲ್ವರು ಕಾಮುಕರು ಅಂದರ್

ಮಂಗಳೂರು: 8ರ ಹರೆಯದ ಜಾರ್ಖಾಂಡ್ ಮೂಲದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವಲಸೆ ಕಾರ್ಮಿಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶ ರಾಜ್ಯದ ಪನ್ನಾ ಜಿಲ್ಲೆಯ ಜಯ ಸಿಂಗ್ (21), ಮುಖೇಶ್ ಸಿಂಗ್(20), ಮುನೀಮ್ ಸಿಂಗ್(20) ಹಾಗೂ ಜಾರ್ಖಾಂಡ್ ರಾಜ್ಯದ ರಾಂಚಿ ಜಿಲ್ಲೆಯ ಮುನೀಶ್ ತಿರ್ಕಿ(33) ಬಂಧಿತ ಕಾಮುಕರು.


ನಗರದ ಹೊರವಲಯದಲ್ಲಿರುವ ವಾಮಂಜೂರಿನ ಪರಾರಿ ಎಂಬ ಪ್ರದೇಶದಲ್ಲಿರುವ ರಾಜ್ ಟೈಲ್ಸ್ ಫ್ಯಾಕ್ಟರಿಯ ಜಾರ್ಖಾಡ್ ಮೂಲದ ಬಾಲಕಿ ಆದಿತ್ಯವಾರ ಮಧ್ಯಾಹ್ನ 12 ಗಂಟೆಯ ಬಳಿಕ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ 3ಗಂಟೆಗೆ ಗಮನಕ್ಕೆ ಬಂದ ಬಳಿಕ ಆಕೆಯ ಹೆತ್ತವರು ಹುಡುಕಾಟ ನಡೆಸಿದ್ದಾರೆ. ಆರು ಗಂಟೆಯ ಸುಮಾರಿಗೆ ಬಾಲಕಿ ಫ್ಯಾಕ್ಟರಿ ಒಳಗಿರುವ ಮೋರಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ತಕ್ಷಣ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಬಾಲಕಿಯ ಮೃತದೇಹವನ್ನು ಮಹಜರು ನಡೆಸಲು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ವೈದ್ಯಕೀಯ ವರದಿ ಬಂದಿದೆ.


ಆದಿತ್ಯವಾರವೇ ತನಿಖೆ ಆರಂಭಿಸಿರುವ ಪೊಲೀಸರು ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಮಧ್ಯಪ್ರದೇಶ, ಜಾರ್ಖಾಂಡ್ ಮೂಲದ ಸುಮಾರು 20 ಮಂದಿ ವಲಸೆ ಕಾರ್ಮಿಕರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ. ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ 20 ಮಂದಿ ಹೊರ ರಾಜ್ಯದ ವಲಸೆ ಕಾರ್ಮಿಕರಲ್ಲಿ 2 ಜನರ ಹೆಂಡತಿ ಮಕ್ಕಳು ಜೊತೆಗಿದ್ದರು. ಇವರಲ್ಲಿ ಮೃತ ಬಾಲಕಿ, ಆಕೆಯ ಮೂವರು ಸಹೋದರ-ಸಹೋದರಿಯರು ಹಾಗೂ ಮತ್ತೊಂದು ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಆರು ಮಕ್ಕಳು ಈ ಟೈಲ್ಸ್ ಫ್ಯಾಕ್ಟರಿಯಲ್ಲಿಯೇ ವಾಸವಾಗಿದ್ದರು. ಉಳಿದಂತೆ ಎಲ್ಲಾ ವಲಸೆ ಕಾರ್ಮಿಕರು ಇಲ್ಲಿಯೇ ಶೆಡ್ ಗಳಲ್ಲಿ ವಾಸವಾಗಿದ್ದರು.

ರವಿವಾರ ಎಲ್ಲಾ ವಲಸೆ ಕಾರ್ಮಿಕರು ದಿನಸಿ ಸಾಮಾಗ್ರಿ  ಖರೀದಿ ಮಾಡಲು, ಸಿನಿಮಾ ವೀಕ್ಷಣೆಗೆಂದು ಹೊರ ಹೋಗುತ್ತಾರೆ. ಬಾಲಕಿಯ ತಂದೆ ತಾಯಿ ಯಾವತ್ತೂ ಮದ್ಯದ ನಶೆಯಲ್ಲಿರುತ್ತಾರೆ. ಇದನ್ನು ಗಮನಿಸಿರುವ ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ಲ್ಯಾನ್ ಮಾಡಿದ್ದಾರೆ. 


ಜಯ ಸಿಂಗ್ ಹಾಗೂ ಮುನೀಮ್ ಸಿಂಗ್ ಈ ಹಿಂದೆಯೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಕೃತ್ಯ ನಡೆಸಿರುವ ನಾಲ್ಕೈದು ದಿನಗಳ ಹಿಂದೆಯೇ ಮದ್ಯಪಾನ ಮಾಡುತ್ತಿದ್ದಾಗ ಈ ಬಗ್ಗೆ ಮಾತನಾಡಿದ್ದಾರೆ. ಆಗ ಜೊತೆಗಿದ್ದ ಮುಖೇಶ್ ಸಿಂಗ್ ಎಂಬಾತನೂ ಮುಂದೆ ತನಗೂ ಒಂದು ಚ್ಯಾನ್ಸ್ ಕೊಡಿ ಎಂದಿದ್ದಾನೆ. ಎಲ್ಲರೂ ಆದಿತ್ಯವಾರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ಲ್ಯಾನ್ ನಡೆಸಿದ್ದಾರೆ. ಶನಿವಾರ ಪುತ್ತೂರಿನಿಂದ ಆಗಮಿಸಿರುವ ಮುನೀಶ್ ತಿರ್ಕಿ ಕೂಡಾ ಇವರ ಜೊತೆಗೆ ಸೇರಿಕೊಂಡಿದ್ದಾನೆ.

ಆದಿತ್ಯವಾರ ಮಧ್ಯಾಹ್ನ 1.10 ರ ಸುಮಾರಿಗೆ ಬಾಲಕಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಮಯದಲ್ಲಿ  ಜಯ ಸಿಂಗ್ ತನ್ನ ಬಾಡಿಗೆ ಕೊಠಡಿಯೊಳಗೆ ಬಾಲಕಿಯನ್ನು ಕರೆ ತಂದಿದ್ದಾನೆ. ಈ ಸಂದರ್ಭ ಮುನೀಶ್ ತಿರ್ಕಿ ಎಂಬಾತ ಯಾರಾದರೂ ಬರುತ್ತಾರೆಯೇ ಎಂದು ಹೊರಗಡೆ ಕಾಯುತ್ತಿದ್ದ. ಒಳಗಡೆ ಮೂವರು ಆರೋಪಿಗಳು ಒಬ್ಬರಾದ ಬಳಿಕ ಒಬ್ಬರು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ಸಂದರ್ಭ ವಿಪರೀತ ರಕ್ತಸ್ರಾವಗೊಂಡು ಬಾಲಕಿ ನೋವಿನಿಂದ ಚೀರಾಟ ಮಾಡಿದ್ದಾಳೆ. ಇದರಿಂದ ಹೆದರಿದ ಆರೋಪಿಗಳು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಆಕೆಯ ಮೃತದೇಹವನ್ನು ಅಲ್ಲಿಯೇ ಇದ್ದ ಮೋರಿಗೆ ಎಸೆದಿದ್ದಾರೆ.


ಕೃತ್ಯ ಎಸಗಿರುವ ಬಳಿಕ ಮುಖೇಶ್ ಸಿಂಗ್ ಹಾಗೂ ಮುನೀಶ್ ತಿರ್ಕಿ ಪುತ್ತೂರಿಗೆ ಓಡಿಹೋಗಿದ್ದಾರೆ‌. ಉಳಿದಿಬ್ಬರು ಆರೋಪಿಗಳು ಇಲ್ಲಿಯೇ ಇದ್ದು ಇಲ್ಲಿನ ಬೆಳವಣಿಗೆಯನ್ನು ಗಮನಿಸಿದ್ದಾರೆ. ಈ ಸಂದರ್ಭ ಎಲ್ಲರೂ ಬಾಲಕಿಯ ಹುಡುಕಾಟ ನಡೆಸಿದಾಗ ಆರೋಪಿಗಳು ಹುಡುಕಾಟ ನಡೆಸುವ ನಾಟಕವಾಡಿದ್ದಾರೆ. 

ಬಾಲಕಿಯ ಮೃತದೇಹ ಪತ್ತೆಯಾದ ಬಳಿಕ ಪೊಲೀಸರು ಅಲ್ಲಿದ್ದ ಎಲ್ಲಾ ಕಾರ್ಮಿಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ‌.  ತನಿಖೆಯ ವೇಳೆ ಈ ನಾಲ್ವರ ಮೇಲೆ ಪೊಲೀಸರಿಗೆ ಶಂಕೆ ಬಲವಾಗಿ ಹೆಚ್ಚಿನ ತನಿಖೆ ನಡೆಸಿದಾಗ ಕೃತ್ಯ ಎಸಗಿರುವ ಬಗ್ಗೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಹಾಗೂ ಕೊಲೆ ಪ್ರಕರಣ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article