-->
ಅಹ್ಮದ್ ನಗರ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ 10 ರೋಗಿಗಳು

ಅಹ್ಮದ್ ನಗರ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ 10 ರೋಗಿಗಳು

ಅಹ್ಮದ್‌ನಗರ (ಮಹಾರಾಷ್ಟ್ರ): ನಗರದ ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಶನಿವಾರ‌ ನಡೆದ ಭಾರೀ ಬೆಂಕಿ ಅವಘಡ 10 ರೋಗಿಗಳು ಮೃತಪಟ್ಟಿದ್ದು, ಓರ್ವ ರೋಗಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. 

ಇಂದು ಮಧ್ಯಾಹ್ನ 11 ಗಂಟೆ ಸುಮಾರಿಗೆ 17 ರೋಗಿಗಳಿದ್ದ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಈ ದುರಂತದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆಯವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. 

ಇದೀಗ ಇಲ್ಲಿನ ಇತರ ರೋಗಿಗಳನ್ನು ಬೇರೊಂದು ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಈ ದುರಂತ ಸಂಭವಿಸಿರುವುದಕ್ಕೆ ನಿಖರ ಕಾರಣ ತಿಳಿದಿಲ್ಲ. ಅಗ್ನಿಶಾಮಕ ದಳ ನಡೆಸಿರುವ ಪ್ರಾಥಮಿಕ ತನಿಖೆಯಿಂದ ದುರಂತ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭೋಸಲೆ ಸುದ್ದಿಗಾರರಿಗೆ ತಿಳಿಸಿದರು.

ವೈದ್ಯರು, ಸಿಬ್ಬಂದಿಯು, ಸ್ಥಳೀಯರ ನೆರವಿನೊಂದಿಗೆ ಬೆಂಕಿಯಲ್ಲಿ ಸಿಲುಕಿಕೊಂಡಿರುವ ಹಲವಾರು ರೋಗಿಗಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಘಟನೆಯ ಬಗ್ಗೆ ಅಧಿಕೃತ ವಿಚಾರಣೆ ನಡೆಯಲಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ತುರ್ತು ಉದ್ದೇಶದಿಂದ ಈ ಐಸಿಯುವನ್ನು ಹೊಸದಾಗಿ ನಿರ್ಮಿಸಲಾಗಿತ್ತು. ಇದೇ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗಂಭೀರ ವಿಚಾರವಾಗಿದೆ ಎಂದು ಹೇಳಿದ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ. ಅಲ್ಲದೆ ಎಲ್ಲ ಆಸ್ಪತ್ರೆಗಳಿಗೆ ‘ಫೈರ್ ಆಡಿಟ್’ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಹ್ಮದ್‌ನಗರ ಸರಕಾರಿ ಆಸ್ಪತ್ರೆಯ ವರದಿಯನ್ನು ಪರಿಶೀಲಿಸಲಾಗುವುದು. ಅವಘಡದ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಬೆಂಕಿ ಅವಘಡಕ್ಕೆ ಹೊಣೆಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. 

Ads on article

Advertise in articles 1

advertising articles 2

Advertise under the article