ಪ್ರೇಯಸಿಗೆ ಗಿಫ್ಟ್ ನೀಡಲೆಂದು ಕಳವು ಕೃತ್ಯಕ್ಕಿಳಿದ ಪ್ರಿಯಕರ: ಪ್ರೇಯಸಿಯೇ ಸಾಥ್!

ಬೆಂಗಳೂರು: ಬಾಡಿಗೆ ಮನೆ ಅರಸುವ ನೆಪದಲ್ಲಿ ಮನೆಗೆ ನುಗ್ಗಿ ಕಳುವುಗೈಯ್ಯುತ್ತಿದ್ದ ಪ್ರೇಮಿಗಳಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ನಡೆದಿದೆ.

ವಿನಯ್ (32) ಹಾಗೂ ಪ್ರೇಯಸಿ ಕೀರ್ತನಾ(25) ಬಂಧಿತ ಪ್ರೇಮಿಗಳು. 

ಪ್ರೇಯಸಿಗೆ ಗಿಫ್ಟ್ ಕೊಡುವುದಕ್ಕೆಂದು ಕಳವುಗೈಯಲು ಆರಂಭಿಸಿದ್ದ ಪ್ರಿಯಕರನಿಗೆ ಪ್ರೇಯಸಿಯೇ ಸಾಥ್​ ನೀಡುತ್ತಿದ್ದಳು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಆರೋಪಿ ವಿನಯ್, ರಾಜಾಜಿನಗರದಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದ. ಈತನಿಗೆ ಸದಾ ಗಿಫ್ಟ್‌ ಕೊಡಿಸುವಂತೆ ಪ್ರೇಯಸಿ ಕೀರ್ತನಾ ದುಂಬಾಲು ಬೀಳುತ್ತಿದ್ದಳು. ಆದ್ದರಿಂದ, ವಿನಯ್​ ಒಂದು ಖತರ್ನಾಕ್ ಐಡಿಯಾ ಮಾಡಿದ್ದಾನೆ. ಇದಕ್ಕೆ ಪ್ರೇಯಸಿಯು ಸಾಥ್​ ನೀಡಿದ್ದಾಳೆ.

ಅದೇನಪ್ಪಾ ಐಡಿಯಾವೆಂದರೆ, ಇಬ್ಬರೂ ಬೈಕ್​ನಲ್ಲಿ ಏರಿಯಾ ರೌಂಡ್ಸ್ ಹಾಕುವುದು. ಈ ವೇಳೆ ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದರು. ಮನೆ ಖಾಲಿ ಇದೆ ಎಂಬ ಫಲಕವೇ ಇವರ ಬಂಡವಾಳವಾಗಿತ್ತು. ಬಾಡಿಗೆ ಮನೆಯ ಬಗ್ಗೆ ಮಾತಾಡುವ ಉದ್ದೇಶದಿಂದ ಮಾಲಕರ ಮನೆಗೆ ತೆರಳಿ ಅವರ ಕಣ್ತಪ್ಪಿಸಿ ಖತರ್ನಾಕ್ ಆಗಿ ಕಳವು ಮಾಡುತ್ತಿದ್ದರು.

ಅ.4 ರಂದು ಮಾರುತಿ ನಗರದಲ್ಲಿರುವ ಕುಲಶೇಖರ್ ಎಂಬುವರ ಮನೆಗೆ ಬಂದಿರುವ ಈ ಖತರ್ನಾಕ್ ಪ್ರೇಮಿಗಳು ಲ್ಯಾಪ್ ಟಾಪ್ ಕದ್ದಿದ್ದರು. ಕುಲಶೇಖರ್​ ಅವರು ನೀಡಿರುವ ದೂರಿನ ಆಧಾರದ ಮೇಲೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದಾಗ ಚಂದ್ರಲೇಔಟ್ ಠಾಣಾ ಆರೋಪಿ ಪ್ರೇಮಿಗಳನ್ನು ಬಲೆಗೆ ಬಿದ್ದಿದ್ದಾರೆ.  ಈ ಬಗ್ಗೆ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.