'ನಾನು ಸಾಯುತ್ತಿರುವೆ ನನ್ನ ಬ್ಯಾನರ್​ ಹಾಕಿ ಶ್ರದ್ಧಾಂಜಲಿ ಕೋರಿ' ಎಂದು ಕೆರೆಗೆ ಹಾರಿ ಮೃತಪಟ್ಟ ವಿದ್ಯಾರ್ಥಿ ಸಾವಿನ‌ ಅಸಲಿ ಕಾರಣ ಬಿಚ್ಚಿಟ್ಟ ಸ್ನೇಹಿತರು

ಕೋಲಾರ: ‘ಮಿಸ್ ಯು ಫ್ರೆಂಡ್ಸ್, ಐ ಆ್ಯಮ್ ಗೋಯಿಂಗ್ ಟು ರಿಪ್, ನನ್ನ ಬ್ಯಾನರ್ ಹಾಕಿ' ಎಂದು ಸ್ನೇಹಿತರ ವಾಟ್ಸ್ಆ್ಯಪ್​ ಗ್ರೂಪ್​ಗೆ ಮೆಸೇಜ್​ ಕಳುಹಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಅಸಲಿ ಕಾರಣ ಬಯಲಾಗಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಕೊಳ್ಳೂರು ಕಾಲನಿ ನಿವಾಸಿ ಕಿಶೋರ್ ಕುಮಾರ್ ಮಂಗಳವಾರ ಸಂಜೆ ಸ್ನೇಹಿತರ ವಾಟ್ಸ್ಆ್ಯಪ್​ ಗ್ರೂಪ್​ಗೆ​ ಕೆರೆಯ ಫೋಟೋ ಕಳುಹಿಸಿ, ಸ್ನೇಹಿತರಿಗೆ ‘ಮಿಸ್​ ಯೂ ಫ್ರೆಂಡ್ಸ್​. ನಾನು ಸಾಯುತ್ತಿದ್ದೇನೆ. ನನ್ನ ಬ್ಯಾನರ್​ ಹಾಕಿ ನನಗೆ ಶ್ರದ್ಧಾಂಜಲಿ ಕೋರಿ’ ಎಂದು ಮೆಸೇಜ್​ ಮಾಡಿದ್ದಾನೆ. 

17 ವರ್ಷದ ಕಿಶೋರ್ ಕುಮಾರ್ ಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ. ಈತ ಮಂಗಳವಾರ ಕಾಲೇಜಿಗೆಂದು ಹೋದವನು ಮತ್ತೆ ವಾಪಸ್ ಮನೆಗೆ ಮರಳಿಲ್ಲ. ಅಂದು ಸಂಜೆ ಆತ ಸ್ನೇಹಿತರಿಗೆ “ನಾನು ಸಾಯುತ್ತಿದ್ದೇನೆ, ಮಿಸ್​ ಯೂ ಫ್ರೆಂಡ್ಸ್​… ಬ್ಯಾನರ್​ ಹಾಕಿ ನನಗೆ ಶ್ರದ್ಧಾಂಜಲಿ ಸಲ್ಲಿಸಿ’ ಎಂದು ವಾಟ್ಸ್ಆ್ಯಪ್ ಮೆಸೇಜ್ ಕಳುಹಿಸಿದ್ದ. ಜತೆಗೆ ಶ್ರೀನಿವಾಸಪುರ ಪಟ್ಟಣದ ಅಮಾನಿ ಕೆರೆಯ ಫೋಟೋವನ್ನೂ ಕಳುಹಿಸಿದ್ದ. 

ಗೆಳೆಯರು, ‘ಯಾಕೋ ಹೀಗೆಲ್ಲ ಹೇಳ್ತಿಯಾ? ಕಾಲೇಜಿಗೆ ಬಾರೋ’ ಎಂದು ಮರು ಸಂದೇಶ ಕಳುಹಿಸಿದ್ದರು. ಅದಕ್ಕೆ ಆತ ಮರು ರಿಪ್ಲೈ ಮಾಡಲೇ ಇಲ್ಲ. ಈ ನಡುವೆ ಕಿಶೋರ್​ನನ್ನು ಸ್ನೇಹಿತರು ಸಂಪರ್ಕಿಸಲು ಪ್ರಯತ್ನಿಸಿದ್ದರಾದರೂ ಪ್ರಯೋಜನ ಆಗಲೇ ಇಲ್ಲ. ಆ ಕೂಡಲೇ ಸ್ನೇಹಿತರು ಕಿಶೋರ್​ ಪಾಲಕರಿಗೂ ಮಾಹಿತಿ ನೀಡಿದ್ದರು. ಎಲ್ಲರೂ ಸ್ಥಳಕ್ಕೆ ಬರುವಷ್ಟರಲ್ಲಿ ಕಿಶೋರ್​ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದ. ಕೆರೆ ಬಳಿಯೇ ಚಪ್ಪಲಿ ಮತ್ತು ಬಟ್ಟೆ ಸಿಕ್ಕಿತ್ತು.  ಬುಧವಾರ ಬೆಳಗ್ಗೆ ಕಿಶೋರ್ ಕುಮಾರ್ ಮೃತದೇಹ ಪತ್ತೆಯಾಗಿತ್ತು. 

ಇದೀಗ ಆತನ ಸಾವಿನ ಕಾರಣ ಬಯಲಾಗಿದೆ. ಕಿಶೋರ್​ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಗೆ ಐ ಲವ್​ ಯೂ ಎಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದ.‌ ಈ ಬಗ್ಗೆ ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಳು. ಪ್ರಾಂಶುಪಾಲರು ಕಿಶೋರ್​ನನ್ನು ಕರೆಸಿ ಬುದ್ಧಿ ಹೇಳಿದ್ದರು. ಇದರಿಂದ ನೊಂದ ಕಿಶೋರ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ನೇಹಿತರ ವಲಯದಲ್ಲಿ ಚರ್ಚೆಯಾಗುತ್ತಿದೆ.

ಆದರೆ ಕಿಶೋರ್ ಕುಮಾರ್ ತಂದೆ ವೆಂಕಟೇಶಪ್ಪ ''ನನ್ನ ಮಗನಿಗೆ ಆಗಾಗ ಹೊಟ್ಟೆ ನೋವು ಬರುತ್ತಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರಿಗೆ ತಿಳಿಸಿದ್ದಾರೆ.