
ಕೇರಳ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಯುವ ವೈದ್ಯೆಯ ಆತ್ಮಹತ್ಯೆ ಪ್ರಕರಣ: ಆರೋಪಿಗೆ ಹೈಕೋರ್ಟ್ ಶಾಕ್!
Saturday, October 9, 2021
ತಿರುವನಂತಪುರ: ಕೇರಳದ ಯುವ ವೈದ್ಯೆ ವಿಸ್ಮಯ ನಾಯರ್ ಆತ್ಮಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿತ್ತು. ಈಕೆಯ ಪತಿ ಕಿರಣ್ ಕುಮಾರ್ ಹಣ ದಾಹಕ್ಕೆ ಈ ಯುವ ವೈದ್ಯೆ ಸಾವಿನ ಲೋಕಕ್ಕೆ ಪ್ರಯಾಣಿಸಿದ್ದಳು. ಆದರೆ ವಿಸ್ಮಯ ನಾಯರ್ ಆತ್ಮಹತ್ಯೆ ಮುನ್ನ ಪತಿಯ ಅಸಲಿ ಮುಖವಾಡವನ್ನು ಮೃತ ವೈದ್ಯೆ ಬಿಚ್ಚಿಟ್ಟಿದ್ದಳು.
ಆಕೆಯ ಪತಿ ಕಿರಣ್ ಕುಮಾರ್ ವಿದ್ಯಾವಂತ ಅಲ್ಲದೆ ನಾಗರಿಕ ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿದ್ದ. ಆದೆರೆ ಆತ ಸಮಾಜವೇ ತಲೆತಗ್ಗಿಸುವಂಥ ಕಾಯರ್ವನ್ನು ಎಸಗಿದ್ದ. ವೃತ್ತಿಯಲ್ಲಿ ಕಿರಣ್ ಕುಮಾರ್ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ. ಆದರೆ ಆತನ ಅತಿಯಾದ ದುರಾಸೆ ಪತ್ನಿ, ಯುವ ವೈದ್ಯೆ ವಿಸ್ಮಯ ನಾಯರ್ ಪ್ರಾಣವನ್ನೇ ಕಿತ್ತುಕೊಂಡಿತು. ಇದೀಗ ಜೈಲಿನಲ್ಲಿರುವ ಕಿರಣ್ ಕುಮಾರ್ ನನ್ನು ಕೇರಳ ಸರ್ಕಾರವು, ಸರ್ಕಾರಿ ಕೆಲಸದಿಂದ ವಜಾಗೊಳಿಸಿದೆ.
ಇದೀಗ ಈ ಪ್ರಕರಣದಲ್ಲಿ ಮಹತ್ತರವಾದ ಬೆಳವಣಿಗೆಯೊಂದು ನಡೆದಿದ್ದು, ಕೇರಳ ಹೈಕೋರ್ಟ್ ಆರೋಪಿಗೆ ಬಿಗ್ ಶಾಕ್ ಒಂದನ್ನು ನೀಡಿದೆ. ಆರೋಪಿ ಕಿರಣ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಅರ್ಜಿದಾರರ ಆರೋಪಗಳ ಸ್ವರೂಪ ಮತ್ತು ಗಂಭೀರತೆಯನ್ನು ಪರಿಗಣಿಸಿರುವ ನ್ಯಾಯಾಲಯವು ಕಿರಣ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಮೂರ್ತಿ ಎಂ.ಆರ್.ಅನಿತಾ, ಜಾಮೀನು ಅರ್ಜಿದಾರನ ಮೇಲೆ ವರದಕ್ಷಿಣೆ ಸಾವಿನ ಗಂಭೀರ ಆರೋಪವನ್ನು ಹೊರಿಸಲಾಗಿದೆ. ಇದು ಒಂದು ಸಾಮಾಜಿಕ ಪೆಡಂಭೂತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಕಳೆದ ಜೂನ್ 22ರಿಂದಲೂ ಆರೋಪಿ ಕಿರಣ್ ಕುಮಾರ್ ಜೈಲಿನಲ್ಲಿಯೇ ಇದ್ದಾನೆ.
2020ರ ಮೇಯಲ್ಲಿ ವಿಸ್ಮಯ ನಾಯರ್ ಮತ್ತು ಕಿರಣ್ ಕುಮಾರ್ ವಿವಾಹ ನಡೆದಿತ್ತು. ವಿಸ್ಮಯ ಕುಟುಂಬ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ಬಳಿಕ ದಂಪತಿಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಆದರೆ, ಗಂಡನ ಹಣದಾಹ ಮತ್ತು ಕಿರುಕುಳ ಸಹಿಸಲಾರದೆ ವಿಸ್ಮಯ 2021 ಜೂನ್ 21ರ ಸೋಮವಾರ ಬೆಳಗ್ಗೆ ಪತಿಯ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದರು. ದೇಹದ ಮೇಲೆ ಗಾಯದ ಗುರುತುಗಳಿತ್ತು.
ಸಾವಿಗೆ ಮುಂಚಿನ ದಿನ ರಾತ್ರಿ ವಿಸ್ಮಯ ನಾಯರ್ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್ ಮಾಡಿ, ಬಹುಶಃ ಇದೇ ತನ್ನ ಕೊನೆಯ ಸಂದೇಶ ಆಗಿರಬಹುದು ಎಂದಿದ್ದರು. ಅಲ್ಲದೆ ಪತಿ ಕಿರಣ್ ನೀಡಿರುವ ಹಿಂಸೆಯ ಕೆಲವು ಫೋಟೋಗಳನ್ನು ಆಕೆ ಶೇರ್ ಮಾಡಿಕೊಂಡಿದ್ದರು.
ಪ್ರಕರಣ ನಡೆದ ಬೆನ್ನಲ್ಲೇ ಕಿರಣ್ ಕುಮಾರ್ ನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಅಲ್ಲದೆ, ತಕ್ಷಣ ಆತನನ್ನು ಕೆಲಸದಿಂದಲೇ ವಜಾಗೊಳಿಸಲಾಗಿತ್ತು. ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿ ಪತ್ನಿಗೆ ನೀಡುತ್ತಿದ್ದ ಹಿಂಸೆಯ ವಿರುದ್ಧ ಬಲವಾದ ಸಾಕ್ಷಿಗಳು ಲಭ್ಯವಾಗಿವೆ. ಈ ನಡುವೆ ಕೇರಳ ಸರಕಾರ ಆರೋಪಿ ಕಿರಣ್ ಕುಮಾರ್ ನನ್ನು ಶಾಶ್ವತವಾಗಿ ಸರ್ಕಾರಿ ಕೆಲಸದಿಂದ ವಜಾಗೊಳಿಸಿದೆ. 35 ವರ್ಷದ ಕಿರಣ್ ಕುಮಾರ್ ಕೇರಳ ರಾಜ್ಯದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ.
ಕೇರಳದ ಸಾರಿಗೆ ಸಚಿವ ಆಂಟೋನಿ ರಾಜು ಇಲಾಖೆಯ ಕಾಳಜಿ ದೃಷ್ಟಿಯಿಂದ ಕಿರಣ್ ಕುಮಾರ್ ವಿರುದ್ಧ ತನಿಖೆ ನಡೆಸಲು 45 ದಿನಗಳ ಕಾಲಾವಕಾಶ ನೀಡಿದ್ದರು. ನಿನ್ನೆಗೆ ತನಿಖೆ ಸಂಪೂರ್ಣವಾಗಿದ್ದು, ಪೊಲೀಸರು ತನಿಖಾ ವರದಿಯನ್ನು ಸಚಿವರ ಮುಂದೆ ಪ್ರಸ್ತುತ ಪಡಿಸಿದ್ದಾರೆ. ಅದರಲ್ಲಿ ಕಿರಣ್ ಕುಮಾರ್ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿರುವುದರಿಂದ ಕೆಲಸದಿಂದಲೇ ವಜಾಗೊಳಿಸಲಾಗಿದೆ. ಸದ್ಯ ಆರೋಪಿ ಕಿರಣ್ ವಿರುದ್ಧ ತನಿಖೆ ಮುಂದುವರಿದಿದೆ.