ಪ್ರೀತಿಯ ಬಗ್ಗೆ ಶಿಲ್ಪಾ ಶೆಟ್ಟಿ ಪೋಸ್ಟ್ ಬಗ್ಗೆ ತಲೆಕೆಡಿಸಿಕೊಂಡ ನೆಟ್ಟಿಗರು: ಮೌನಕ್ಕೆ ಜಾರಿದ ನಟಿ

ಮುಂಬೈ: ಅಶ್ಲೀಲ ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಇತ್ತೀಚೆಗೆ ಜಾಮೀನು ದೊರಕಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ಮೊದಲಿಗೆ ಬಹಳ ದುಃಖದಲ್ಲಿದ್ದ‌ ಶಿಲ್ಪಾ ಶೆಟ್ಟಿ ಬಳಿಕ ಸಹಜ ಜೀವನಕ್ಕೆ ಬಂದಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ತೊಡಗಿದ್ದರು.

ಈ ಬಗ್ಗೆ ಒಂದಷ್ಟು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಶಿಲ್ಪಾ ಶೆಟ್ಟಿ ಇದೀಗ ಪ್ರೀತಿಯ ಬಗ್ಗೆ ನಿಗೂಢ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇದರ ಹಿಂದಿನ ಗೂಢಾರ್ಥವೇನು, ಯಾರಿಗಾಗಿ ಬರೆಯಲಾಗಿದೆ ಎಂದು ಅವರ ಅಭಿಮಾನಿಗಳ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. 

ಪ್ರೀತಿಯ ಕುರಿತಾದ ಪುಸ್ತಕದ ಬರಹವೊಂದನ್ನು ಅವರು ಶೇರ್‌ ಮಾಡಿದ್ದಾರೆ. ಅವರು ​​​ಅಮೆರಿಕನ್ ಕವಿಯೊಬ್ಬರ ‘ನಿನ್ನ ಹೃದಯದಲ್ಲಿ ಪ್ರೀತಿ ಇದೆ’ ಎಂಬ ಕವನದ ಹಾಳೆಯೊಂದರ ಫೋಟೋ ತೆಗೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರು ಪ್ರೀತಿಯ ಉಲ್ಲೇಖಿಸಿದ್ದಾರೆ. ಅದರ ಬರಹದ ಅನುವಾದ ಈ ರೀತಿ ಇದೆ. "ಬೇರೊಬ್ಬರನ್ನು ಪ್ರೀತಿಸುವ ಹೃದಯ ನಿಮ್ಮಲ್ಲಿದೆ ಎಂದು ತಿಳಿದಾಗ ನೀವು ಯಶಸ್ವಿಯಾಗುತ್ತೀರಿ. ಪ್ರೀತಿಯಲ್ಲಿ ಬೀಳುವುದು ಸುಲಭ, ಪ್ರೀತಿಸುವುದು ಕಷ್ಟ. ಪ್ರೀತಿಯಲ್ಲಿ ಬಿದ್ದಾಗ, ನಾವು ಪ್ರೀತಿಯನ್ನು ಮರಳಿ ಬಯಸುತ್ತೇವೆ. ಯಾವಾಗ ನಾವು ಮುಕ್ತವಾಗಿ ಪ್ರೀತಿಸುತ್ತೇವೋ, ನಮ್ಮನ್ನೂ ಮುಕ್ತವಾಗಿ ನೀಡುತ್ತೇವೆ. ಈ ರೀತಿ ಪ್ರೀತಿಸಿದಾಗ ಮಾತ್ರ ನಾವು ಅತ್ಯುತ್ತಮ ವ್ಯಕ್ತಿಗಳಾಗುತ್ತೇವೆ’.

ಆದರೆ ಶಿಲ್ಪಾ ಶೆಟ್ಟಿ ಯಾರಿಗೆ ಈ ಸಂದೇಶವನ್ನು ನೀಡಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇಗೈದಿದ್ದಾರೆ‌. ಆದರೆ ಶಿಲ್ಪಾ ಮಾತ್ರ ಇದಕ್ಕೆ ಉತ್ತರಿಸಲೇ ಇಲ್ಲ.