-->

'ದುಡ್ಡು ಕೊಟ್ಟು ಸೀರೆ ಖರೀದಿಸಿ, ಹೆಂಡ್ತಿಯಿಂದ ಬೈಸಿಕೊಳ್ಳದಿದ್ದರೆ ಸಾಕು': ಸಿಎಂ ಬೊಮ್ಮಾಯಿ ಹಾಸ್ಯ

'ದುಡ್ಡು ಕೊಟ್ಟು ಸೀರೆ ಖರೀದಿಸಿ, ಹೆಂಡ್ತಿಯಿಂದ ಬೈಸಿಕೊಳ್ಳದಿದ್ದರೆ ಸಾಕು': ಸಿಎಂ ಬೊಮ್ಮಾಯಿ ಹಾಸ್ಯ

ಬೆಂಗಳೂರು: ‘ನಾವೇನೋ ದುಡ್ಡು ಕೊಟ್ಟು ಸೀರೆ ಖರೀದಿಸಿದ್ದೇವೆ. ಆದರೆ ಡಿಸೈನ್, ಬಣ್ಣ ನೋಡಿ ಮನೆಯಲ್ಲಿ ಹೆಂಡತಿ ಬೈಯ್ಯದಿದ್ದರೆ ಸಾಕು’ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರ ಹಾಸ್ಯಚಟಾಕಿಗೆ ಎಲ್ಲರ ಮುಖದಲ್ಲಿ‌‌ ನಗು ಕಾಣಿಸಿಕೊಂಡಿತು.

ಗಾಂಧಿ ಜಯಂತಿಯ ಅಂಗವಾಗಿ ಖಾದಿ ಉತ್ಪನ್ನಗಳ ಖರೀದಿಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಸಚಿವರಾದ ಎಂ.ಟಿ.ಬಿ.ನಾಗರಾಜು, ಗೋವಿಂದ ಕಾರಜೋಳ, ಸುನಿಲ್​ಕುಮಾರ್ ಜೊತೆ ಗಾಂಧೀ ಭವನದ ಬಳಿಯಿರುವ ಖಾದಿ ಭಂಡಾರಕ್ಕೆ ಭೇಟಿದ್ದರು. ಇಡೀ ಖಾದಿ ಭಂಡಾರವನ್ನೊಮ್ಮೆ ಸುತ್ತು ಹಾಕಿ ವೀಕ್ಷಿಸಿದ ಬೊಮ್ಮಾಯಿಯವರು, ಮೊದಲ ಮಹಡಿಯ ರೇಷ್ಮೆ ವಿಭಾಗಕ್ಕೆ ಆಗಮಿಸಿದ್ದಾರೆ. 

ಅಲ್ಲಿ ತಮ್ಮ ಪತ್ನಿಗಾಗಿ ಸೀರೆಗಳನ್ನೊಮ್ಮೆ ಪರೀಕ್ಷಿಸಿದ್ದಾರೆ. 3-4 ಸೀರೆಗಳನ್ನು ನೋಡಿದ ಅವರು ಹಸಿರು ಬಣ್ಣದ ಸೀರೆಯೊಂದನ್ನು ಖರೀದಿಸಿದ್ದಾರೆ. ಆಗ ಜತೆಯಲ್ಲಿದ್ದ ಗೋವಿಂದ ಕಾರಜೋಳರಿಗೆ, ‘ಕಾರಜೋಳ ಸಾಹೇಬರೇ ನೀವು ಸೀರೆ ಖರೀದಿ ಮಾಡಿ’ ಎಂದು ಉತ್ತೇಜನ ನೀಡಿದ್ದಾರೆ. ಅದಕ್ಕೆ ಅವರು ‘ಇಲ್ಲ ಸೀರೆ ಎಲ್ಲ ನಮಗೆ ಗೊತ್ತಾಗಲ್ಲ’ ಎಂದು ಹೇಳಿ ತಿಳಿಹಾಸ್ಯ ಬೀರಿದ್ದಾರೆ. 

ಆಗ ಬೊಮ್ಮಾಯಿಯವರು ‘ದುಡ್ಡು ಕೊಟ್ಟು ಖರೀದಿ ಮಾಡಿ ಮನೆಗೆ ಹೋಗಿ ಬೈಯ್ಯಿಸಿಕೊಳ್ಳುವುದು’ ಎಂದ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆಗ ಅಲ್ಲಿಗೆ ಬಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ‘ಏನು ಸೀರೆ ಖರೀದಿ ಜೋರಾ’ ಎಂದು ನಗುತ್ತ ಕೇಳಿದ್ದಾರೆ. ‘ಬನ್ನಿ ನೀವು ಖರೀದಿಸಿ’ ಎಂದು ಅವರನ್ನು ಸಿಎಂ ಒತ್ತಾಯಿಸಿದ್ದಾರೆ. 

ಇದರ ಪರಿಣಾಮ ಎಲ್ಲರೂ ತಮ್ಮ ಪತ್ನಿಯರಿಗೆ ಸೀರೆ, ತಮಗೆ ಜುಬ್ಬವನ್ನು ಬಟ್ಟೆ ಕೊಂಡುಕೊಂಡಿದ್ದಾರೆ. ಸಿಎಂ ಖರೀದಿ ಮಾಡಿದ ವಸ್ತ್ರಗಳ ಬೆಲೆಯೇ ಸುಮಾರು 16 ಸಾವಿರ ರೂ. ಆಗಿದೆ. ಬಿಲ್ ಪಾವತಿಸಿ, ಹೊರ ಬರುವಾಗಲೂ ‘ದುಡ್ಡು ಕೊಟ್ಟು ಖರೀದಿಸುತ್ತೇವೆ, ಡಿಸೈನ್, ಕಲರ್ ಬಗ್ಗೆ ಮನೆಯವರು ಬೈಯ್ಯದಿದ್ದರೆ ಸಾಕು’ ಎಂದು ಬೊಮ್ಮಾಯಿ ನಗುತ್ತ ಹೇಳಿದರು. 

ಗಾಂಧಿ ಜಯಂತಿಯ ಅಂಗವಾಗಿ ರಾಜ್ಯದ ಎಲ್ಲಾ ಶಾಸಕರು, ಸಚಿವರು, ಅಧಿಕಾರಿಗಳು ಖಾದಿ ಖರೀದಿಸುವಂತೆ ಸಚಿವ ಎಂ.ಟಿ.ಬಿ.ನಾಗರಾಜ್, ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದರು. ಅದರಿಂದ ಅವರೆಲ್ಲರೂ ಖಾದಿ ಭಂಡಾರಕ್ಕೆ ಭೇಟಿ ನೀಡಿದ್ದರು.

Ads on article

Advertise in articles 1

advertising articles 2

Advertise under the article