ಏಮ್ಸ್‌ ಕ್ಯಾಂಪಸ್ ನಲ್ಲಿಯೇ ಯುವ ವೈದ್ಯೆಯ ಅತ್ಯಾಚಾರದ ಆರೋಪ: ಹಿರಿಯ ಸಹೋದ್ಯೋಗಿಯಿಂದ ಕೃತ್ಯ

ನವದೆಹಲಿ: ಆಲ್‌ ಇಂಡಿಯಾ ಇನ್ಸಿಟ್ಯೂಟ್​ ಆಫ್‌ ಮೆಡಿಕಲ್‌ ಸೈನ್ಸ್‌(ಏಮ್ಸ್‌) ನ ಕ್ಯಾಂಪಸ್ ನಲ್ಲಿಯೇ ಯುವ ವೈದ್ಯೆಯ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ತನ್ನ ಹಿರಿಯ ಸಹೋದ್ಯೋಗಿಯೇ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ವೈದ್ಯೆ ತಡವಾಗಿ ದೂರು ನೀಡಿದ್ದಾಳೆ.

ಘಟನೆ ಸೆ.26 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್‌ 11 ರಂದು ದೂರು ದಾಖಲಾಗಿದೆ. ಎಂಎಲ್‌ಸಿ (ಮೆಡಿಕೋ ಲೀಗಲ್‌ ಕೇಸ್‌) ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. 

ಸೆಪ್ಟೆಂಬರ್‌ 26 ರಂದು ಬರ್ತ್ ಡೇ ಮಾಡಲೆಂದು ಹಿರಿಯ ಸಹೋದ್ಯೋಗಿ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಆತ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಸಂತ್ರಸ್ತ ವೈದ್ಯೆ ತನ್ನ ತಂಡಕ್ಕೆ ತಿಳಿಸಿದ್ದಾಳೆ. ಆರೋಪಿಯು ವಿವಾಹಿತನಾಗಿದ್ದು, ಏಮ್ಸ್‌ ಕ್ಯಾಂಪಸ್ ನಲ್ಲೇ ಕುಟುಂಬದೊಂದಿಗೆ ನೆಲೆಸಿದ್ದಾನೆ. 

ಘಟನೆ ನಡೆದ ರಾತ್ರಿ ಆರೋಪಿಯ ಕುಟುಂಬ ಮನೆಯಲ್ಲಿ ಇರಲಿಲ್ಲ. ತನ್ನ ಇತರ ಸಹೋದ್ಯೋಗಿಗಳೊಂದಿಗೆ ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಸಂತ್ರಸ್ತೆ ಮದ್ಯಸೇವಿಸಿ ಆರೋಪಿ ಮನೆಯಲ್ಲೇ ಮಲಗಿದ್ದಳು. ಆಗ ಹಿರಿಯ ಸಹೋದ್ಯೋಗಿ ಒತ್ತಾಯ ಪೂರ್ವಕವಾಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಇತರ ವೈದ್ಯರುಗಳನ್ನು ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.