-->
ಬೆಳ್ತಂಗಡಿ: ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರವೆಸಗಿ ಮಗುವಿನ ಜನ್ಮಕ್ಕೆ ಕಾರಣವಾದ ಆರೋಪಿ ಮೇಲಿನ ಅಪರಾಧ ಸಾಬೀತು

ಬೆಳ್ತಂಗಡಿ: ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರವೆಸಗಿ ಮಗುವಿನ ಜನ್ಮಕ್ಕೆ ಕಾರಣವಾದ ಆರೋಪಿ ಮೇಲಿನ ಅಪರಾಧ ಸಾಬೀತು

ಮಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿರುವ ವ್ಯಕ್ತಿಯ ಮೇಲಿನ ಅಪರಾಧ ಕೃತ್ಯ ಸಾಬೀತಾಗಿದೆ ಎಂದು ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 (ಪೊಕ್ಸೊ) ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ನಿವಾಸಿ ಪಿ.ಜೆ. ಜೇಕಬ್ ಯಾನೆ ಚಾಕೋಚ‌ ಅತ್ಯಾಚಾರ ಎಸಗಿರುವ ಅಪರಾಧಿ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದಲಿತ ಬಾಲಕಿಯೋರ್ವಳು 2015ರ ಫೆಬ್ರವರಿಯಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಳು. ಈ ಸಂದರ್ಭ ಆಕೆ ಪಿ.ಜೆ.ಜೇಕಬ್ ಅಲಿಯಾಸ್ ಚಾಕೋಚ ಎಂಬಾತನ ಮನೆ ಬಳಿಯ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆತ ವಿದ್ಯಾರ್ಥಿನಿಯನ್ನು ತಡೆದು ನಿಲ್ಲಿಸಿ ಬಲಾತ್ಕಾರವಾಗಿ ಮನೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಅಲ್ಲದೆ ಆತ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನದಿಗೆ ಹಾಕಿ ಕೊಲೆ ಮಾಡುವುದಾಗಿ ಬೆದರಿಸಿದ್ದ.

ಆ ಬಳಿಕವೂ ಆತ ಬಾಲಕಿ ಶಾಲೆಯಿಂದ ಮನೆಗೆ ಬರುವ ಸಂದರ್ಭದಲ್ಲಿ ತಡೆದು ನಿಲ್ಲಿಸಿ ರಬ್ಬರ್ ತೋಟಕ್ಕೆ ಕರೆದೊಯ್ದು ಬಲವಂತದಿಂದ ಅತ್ಯಾಚಾರವೆಸಗಿದ್ದ. ಇದೇ ರೀತಿ ಬಹಳಷ್ಟು ಬಾರಿ ಆತ ಈ ಕೃತ್ಯ ಎಸಗಿದ್ದ. ಪರಿಣಾಮ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. 

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ಡಿಎನ್‌ಎ ಪರೀಕ್ಷೆಯಲ್ಲಿ ಬಾಲಕಿ ಗರ್ಭಿಣಿಯಾಗಲು ಆರೋಪಿ ಪಿ.ಜೆ.ಜೇಕಬ್ ನೇ ಕಾರಣ ಎಂಬುದು ದೃಢಪಟ್ಟಿತ್ತು. ಈ ಬಗ್ಗೆ ಎಎಸ್‌ಪಿ ರಾಹುಲ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 

ಈ ಪ್ರಕರಣವನ್ನು ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 (ಪೊಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ. ಭಟ್ 14 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದು ಪಿ.ಜೆ.ಜೇಕಬ್ ಮಾಡಿರುವ ಅಪರಾಧ ಸಾಬೀತಾಗಿರುವುದಾಗಿ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ. 

ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೊಕ್ಸೊ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

Ads on article

Advertise in articles 1

advertising articles 2

Advertise under the article