ಊಟ, ತಿಂಡಿ, ನೀರು ಕೊಟ್ಟಿಲ್ಲ ಎಂದು ಸಂಪೂರ್ಣ ಮದುವೆ ಫೋಟೋಗಳನ್ನು ವಧು-ವರರ ಮುಂಭಾಗವೇ ಡಿಲೀಟ್ ಮಾಡಿದ ಫೋಟೋಗ್ರಾಫರ್!

ನವದೆಹಲಿ: ಹೆಚ್ಚಿನ ಮದುವೆ ಸಮಾರಂಭಗಳಲ್ಲಿ ಅತೀ ಬ್ಯುಸಿ ಆಗಿರೋರು ಅಂದ್ರೆ ಫೋಟೋಗ್ರಾಫರ್ ಗಳು. ಸ್ವಲ್ಪ ಹೊತ್ತು ಕೂರೋದಕ್ಕೂ ಪುರುಸೋತ್ತಿಲ್ಲದೆ ಅವರು ಫೋಟೋಗಳನ್ನು ಚಕಚಕನೇ ತೆಗೆಯುತ್ತಿರುತ್ತಾರೆ. ಕೊನೆಗೆ ಅವರ ಊಟ ಆಯ್ತಾ, ಊಟ ಮಾಡ್ತೀರಾ ಅನ್ನೋ ಒಂದು ಜನವೂ ಇರೋಲ್ಲ.

ಇಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ಸಿಟ್ಟಿಗೆದ್ದ ಫೋಟೋಗ್ರಾಫರ್ ಮದುವೆಯ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿರುವ ಘಟನೆ ನಡೆದಿದೆ‌. ಇದೀಗ ಈ ವಿಚಾರ ಭಾರಿ ವೈರಲ್‌ ಆಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಒಂದಷ್ಟು ಖರ್ಚು ಉಳಿಸುವ ಉದ್ದೇಶದಿಂದ ಮದುಮಗ ತನ್ನ ಸ್ನೇಹಿತನನ್ನೇ ಫೋಟೋಗ್ರಾಫರ್‌ ಆಗಿ ಬರಲು ಹೇಳಿದ್ದಾನೆ. ಆತ ನಿಜವಾಗಿಯೂ ಮದುವೆ ಫೋಟೋಗ್ರಾಫರ್ ಅಲ್ಲ‌. ಆದರೆ ಪೆಟ್ ಡಾಗ್ ಗಳ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುತ್ತಿದ್ದ‌. ಆದರೆ ಈ ಸ್ನೇಹಿತ ಮದುವೆ ಫೋಟೋಗ್ರಫಿಗೆ ಬರುವುದಿಲ್ಲ ಎಂದು ಹೇಳಿದರೂ ಕೇಳದೇ ಮದುಮಗ ಒತ್ತಾಯಿಸಿದ್ದಾನೆ. ಕೊನೆಗೆ ಇಂತಿಷ್ಟು ದುಡ್ಡು ಕೊಡುವ ಮಾತುಕತೆ ನಡೆಸಿ ಮದುವೆ ಫೋಟೋ ತೆಗೆಯಲು ಸ್ನೇಹಿತ ಒಪ್ಪಿದ್ದಾನೆ.

ಬೆಳಗ್ಗಿನಿಂದ ಸಂಜೆಯವರೆಗೂ ಮದುವೆ ಕಾರ್ಯಕ್ರಮ ನಡೆಯುತ್ತಲೇ ಇದೆ. ಆದರೆ ಒಂದು ಸಲವೂ ಮದುಮಗನ ಕಡೆಯವರಾಗಲಿ, ಮದುಮಗಳ ಕಡೆಯವರಾಗಲಿ ಈ ಫೋಟೋಗ್ರಾಫರ್‌ನನ್ನು ಮಾತನಾಡಿಸಲಿಲ್ಲ. ಕನಿಷ್ಠ ಪಕ್ಷ ಊಟ, ತಿಂಡಿಗೂ ಮಾಡು ಅಂತಾನೂ ಹೇಳಿಲ್ಲ. ಫೋಟೋಗ್ರಾಫರ್ ಹಸಿವಿನಿಂದ ಬಾಯಿಬಿಟ್ಟು ಈ ಬಗ್ಗೆ ಹೇಳಿದರೂ ಇದೊಂದು ಫೋಟೋ ಇದೊಂದು ಫೋಟೋ ಎನ್ನುತ್ತಲೇ ಕಾಲ ಕಳೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಫೋಟೋಗ್ರಾಫರ್‌ ಮದುವೆ ಕಾರ್ಯಕ್ರಮ ಮುಗಿಯುವವರೆಗೆ ಫೋಟೋ ತೆಗೆದು ಬಳಿಕ‌ ವಧು-ವರರ ಮುಂಭಾಗವೇ ಸಂಪೂರ್ಣ ಫೋಟೋ ಡಿಲೀಟ್‌ ಮಾಡಿ ಸೇಡು ತೀರಿಸಿಕೊಂಡಿದ್ದಾನೆ!

‘ಬೆಳಗ್ಗಿನಿಂದ ಸಂಜೆಯವರೆಗೂ‌ ಫೋಟೊ ತೆಗೆದಿದ್ದೇನೆ. ಆದರೆ ಸಂಜೆಯವರೆಗೆ ಯಾರೂ ಊಟ, ತಿಂಡಿ ನೀಡಲಿಲ್ಲ. ಸಿಕ್ಕಾಪಟ್ಟೆ ಸೆಕೆ ಇದ್ದರೀ ಒಂದು ಲೋಟ ನೀರನ್ನೂ ಯಾರೂ ಕೊಟ್ಟಿರಲಿಲ್ಲ' ಅದಕ್ಕಾಗಿ ಮದುವೆಯ ಸಂಪೂರ್ಣ ಫೋಟೋ ಡಿಲೀಟ್ ಮಾಡಿದೆ ಎಂದು ತನಗಾಗಿರುವ ಅನುಭವವನ್ನು ಜಾಲತಾಣಗಳಲ್ಲಿ ಫೋಟೋಗ್ರಾಫರ್‌ ಶೇರ್‌ ಮಾಡಿದ್ದಾನೆ. ನೂರಾರು‌ಮಂದಿ ನಟ್ಟಿಗರಿಂದ ಕಮೆಂಟ್‌ಗಳು ಬಂದಿದ್ದು, ಕೆಲವರು ಈ ಬಗ್ಗೆ ತಮಾಷೆ ಮಾಡಿ ಹಾಸ್ಯಾಸ್ಪದವಾಗಿ ತೆಗೆದುಕೊಂಡಿದ್ದಾರೆ‌. ಆದರೆ ಹೆಚ್ಚಿನವರು ತಾವು ಇನ್ನು ಮುಂದೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.