-->
ಮದುವೆಯಾಗಿ ಎಂಟೇ ದಿನಕ್ಕೆ ಅಣ್ಣನಿಂದಲೇ ಹತ್ಯೆಯಾದಳು ಈ ನತದೃಷ್ಟೆ: ಎರಡನೇ ಮದುವೆಯಾದದ್ದು ತಪ್ಪೇ?

ಮದುವೆಯಾಗಿ ಎಂಟೇ ದಿನಕ್ಕೆ ಅಣ್ಣನಿಂದಲೇ ಹತ್ಯೆಯಾದಳು ಈ ನತದೃಷ್ಟೆ: ಎರಡನೇ ಮದುವೆಯಾದದ್ದು ತಪ್ಪೇ?

ಹುಬ್ಬಳ್ಳಿ: ವಾರದ ಹಿಂದಷ್ಟೇ ಮದುವೆ ಆಗಿ ಹೊಸ ಬಾಳಿನ ಕನಸು ಕಟ್ಟಿಕೊಂಡಿದ್ದ ನವವಿವಾಹಿತೆಯನ್ನು ಸ್ವಂತ ಅಣ್ಣನೇ ಬರ್ಬರವಾಗಿ ಹತ್ಯೆ ಮಾಡಿ ಪೊಲೀಸ್​ ಠಾಣೆಗೆ ಹೋಗಿ ಶರಣಾದ ಘಟನೆ ನವಲಗುಂದ ಪಟ್ಟಣದ ಕಲ್ಮೇಶ್ವರ ಗುಡಿ ಓಣಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಶಶಿಕಲಾ ನಿಂಗಪ್ಪ ಸುಣಗಾರ (31) ಹತ್ಯೇಗಿಡಾದ ನತದೃಷ್ಟೆ. ಮೃತಪಟ್ಟ ಶಶಿಕಲಾ ನಿಂಗಪ್ಪ ಸುಣಗಾರ‌ ಅವರ ಸಹೋದರ ಮಹಾಂತೇಶ ಶರಣಪ್ಪನವರ ಕೊಲೆಗೈದಿರುವ ಆರೋಪಿ. 

ಶಶಿಕಲಾ ನಿಂಗಪ್ಪ ಸುಣಗಾರ‌ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಇವರು 8 ದಿನಗಳ ಹಿಂದೆಯಷ್ಟೇ ರವಿ ಪಾಠಕ್​ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಪತಿಯ ಮನೆಯಲ್ಲಿದ್ದ ತಂಗಿಯ ಮನೆಗೆ ಮಂಗಳವಾರ ಹೋಗಿದ್ದ ಆರೋಪಿ ಅಣ್ಣ, ಶಶಿಕಲಾ ಕಣ್ಣಿಗೆ ಖಾರದಪುಡಿಯನ್ನು ಎರಚಿ ತಲ್ವಾರ್​ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 

ಆ ಬಳಿಕ ಮಹಾಂತೇಶ ಶರಣಪ್ಪನವರ ನವಲಗುಂದ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಅಲ್ಲದೆ ತಾನು ಕೊಲೆಗೈದಿರುವ ವಿಚಾರವನ್ನು ವಿವರಿಸಿದ್ದಾನೆ. 

ಅಷ್ಟಕ್ಕೂ ಈತ ಈ ಕೃತ್ಯವನ್ನು ಎಸಗಿರುದೇಕೆ ಗೊತ್ತೇ?, ಶಶಿಕಲಾ ಅವರಿಗೆ ಈ ಹಿಂದೆ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದ ನಿಂಗಪ್ಪ ಎಂಬುವರೊಂದಿಗೆ ವಿವಾಹವಾಗಿತ್ತು. ಮದುವೆಯಾದ 6 ತಿಂಗಳಿಗೆ ನಿಂಗಪ್ಪ ಮೃತಪಟ್ಟಿದ್ದರು. ಆ ಬಳಿಕ ಶಶಿಕಲಾ ತವರಿಗೆ ಬಂದು ಉಳಿದಿದ್ದಳು. ಈ ನಡುವೆ ರವಿ ಎಂಬವರೊಂದಿಗೆ ಆಕೆಗೆ ಪ್ರೀತಿಯಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿ, 8ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದರು. 

ಆದರೆ ಈ ಮದುವೆಗೆ ಸಹೋದರ ಮಹಾಂತೇಶನ ಒಪ್ಪಿಗೆ ಇರಲಿಲ್ಲ. ಆದರೂ ಶಶಿಕಲಾ, ಕಳೆದ ವಾರ ರವಿಯನ್ನು ವಿವಾಹವಾಗಿ ಆತನ ಮನೆಗೆ ಸೇರಿದ್ದರು. ಇದೇ ವಿಚಾರವಾಗಿ ಸಹೋದರ ಮಹಾಂತೇಶ ಹಾಗೂ ಶಶಿಕಲಾ ನಡುವೆ ಹಲವು ಬಾರಿ ಜಗಳವೂ ನಡೆದಿತ್ತು ಎನ್ನಲಾಗಿದೆ. ಮದುವೆಯ ಬಗ್ಗೆ ಅಸಮಾಧಾನದಿಂದ ಮಂಗಳವಾರ ಮಧ್ಯಾಹ್ನ ತಂಗಿಯ ಪತಿ ಮನೆಗೆ ಹೋಗಿದ್ದ ಮಹಾಂತೇಶ ಸಹೋದರಿ ಜತೆ ಜಗಳ ತೆಗೆದಿದ್ದಾನೆ. ಇಬ್ಬರ ನಡುವೆ ವಾಗ್ವಾದ ಉಂಟಾಗಿ ಏಕಾಏಕಿ ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿದ ಮಹಾಂತೇಶ ಹರಿತವಾದ ತಲ್ವಾರ್​ನಿಂದ ಕೊಚ್ಚಿ ಕೊಲೆಗೈದಿದ್ದಾನೆ. 

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ನವಲಗುಂದ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article