ರಾಯ್‌ಪುರ: ಮಹಿಳೆಯರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ನಿವಾರಣೆಗೆ ಅವರು ಒಂದು ಪೆಗ್ ಹಾಕಿಕೊಂಡು ಮಲಗಬೇಕು ಎಂದು ಛತ್ತೀಸಗಢದ ಕಾಂಗ್ರೆಸ್ ಸಚಿವೆ ಅನಿಲಾ ಭೇಡಿಯಾ ಹೇಳಿರುವ ಹೇಳಿಕೆ ವೈರಲ್ ಆಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಅನಿಲಾ ಭೇಡಿಯಾ, ಮಹಿಳೆಯರು ಕೂಡ ಮದ್ಯಸೇವನೆ ಮಾಡಬೇಕು ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಛತ್ತೀಸಗಢದ ಸಿಎಂ ಭೂಪೇಶ್ ಬಘೇಲ್ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಚಿಂತನೆ ನಡೆಸುತ್ತಿದ್ದರೆ, ಸಚಿವೆ ಅನಿಲಾ ಭೇಡಿಯಾ, ‘ಒತ್ತಡ ನಿರ್ವಹಣೆ ಮಾಡಲು ಮಹಿಳೆಯರು ಮಲಗುವ ಮುನ್ನ ಮದ್ಯಪಾನ ಮಾಡಿ ಎಂದು ಹೇಳಿಕೆ ನೀಡಿರುವುದು ಭಾರಿ ವಿವಾದವನ್ನು ಸೃಷ್ಟಿಸಿದೆ.
"ಮಹಿಳೆಯರು ಮನೆ ಮತ್ತು ಕುಟುಂಬವನ್ನು ನಿರ್ವಹಣೆ ಮಾಡುತ್ತಾರೆ. ಇದರಿಂದ ಅವರಿಗೆ ಸಹಜವಾಗಿ ಮಾನಸಿಕ ಒತ್ತಡವಿರುತ್ತದೆ. ಅದಕ್ಕಾಗಿ ಸ್ವಲ್ಪ ಮದ್ಯ ಸೇವಿಸಿ ಮಲಗಿ" ಎಂದು ಹೇಳಿರುವ ಸಚಿವೆಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಚಿವೆಯ ಈ ಹೇಳಿಕೆಯಿಂದ ಸರ್ಕಾರ ಪೇಚಿಗೆ ಸಿಲುಕಿದೆ. ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸುದಾಗಿ ಕಾಂಗ್ರೆಸ್ ಪ್ರತಿಜ್ಞೆ ಮಾಡಿತ್ತು. ಸಚಿವೆ ಈ ರೀತಿಯ ಹೇಳಿಕೆಯ ಅರ್ಥವೇನು ಎಂದು ಬಿಜೆಪಿ ಕುಹಕವಾಡುತ್ತಿದೆ. ಇದೊಂದು ನಾಚಿಕೆಗೇಡಿನ ಹೇಳಿಕೆಯೆಂದ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.