ರಾಜಧಾನಿಯಲ್ಲಿ ಮತ್ತೆ ಒಂದೇ ಅಪಾರ್ಟ್‌ಮೆಂಟ್ ನ ನಾಲ್ವರು ನಾಪತ್ತೆ!

ಬೆಂಗಳೂರು: ನಗರದಲ್ಲಿ ಒಂದೇ ಶಾಲೆಯ ಒಂದೇ ಕ್ಲಾಸ್ ನ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಬೆನ್ನಿಗೆ ಮತ್ತೆ ನಾಲ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. 

ಇಲ್ಲಿ ಒಂದೇ ಅಪಾರ್ಟ್​ಮೆಂಟ್​ನ ಮೂವರು ಮಕ್ಕಳೊಂದಿಗೆ ಯುವತಿಯೋರ್ವಳು ನಾಪತ್ತೆಗಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ಎಜಿಬಿ ಲೇಔಟ್​​ ನ ಕ್ರಿಸ್ಟಲ್ ಅಪಾರ್ಟ್​ಮೆಂಟ್​ ನಿವಾಸಿ ಯುವತಿ ಅಮೃತವರ್ಷಿಣಿ (21), ರಾಯನ್​ ಸಿದ್ಧಾಂತ (12), ಭೂಮಿ (12) ಮತ್ತು ಚಿಂತನ್​ (12) ನಾಪತ್ತೆಯಾದವರು. 

ಆದರೆ ನಾಲ್ವರೂ ಒಂದೇ ರೀತಿಯ ಪತ್ರ ಬರೆದಿಟ್ಟು ನಾಪತ್ತೆ ಆಗಿದ್ದಾರೆ. ಮೂವರು ಮಕ್ಕಳು ಓದೋಕೆ ಆಸಕ್ತಿ ಇಲ್ಲ, ಆಡೋಕೆ ಇಷ್ಟ, ಅದ್ರಲ್ಲೇ ದುಡಿತೀವಿ ಅಂತ ಮನೆ ಬಿಟ್ಟು ಹೋಗಿದ್ದಾರೆ‌. ಮಕ್ಕಳು ಬೆಳಗಿನಿಂದ ಕಾಣಿಸದಿರುವುದರಿಂದ ಪಾಲಕರು ಸೋಲದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಮಕ್ಕಳು ಸ್ಪೋರ್ಟ್ಸ್​ ಐಟಂ ಜತೆಗೆ ಸ್ಲಿಪ್ಪರ್, ಬ್ರಶ್, ಟೂತ್​ಪೇಸ್ಟ್​, ವಾಟರ್ ಬಾಟಲ್​, ಕ್ಯಾಶ್​ ಹಿಡಿದುಕೊಂಡು ಬರಬೇಕು ಎಂದು ಪರಸ್ಪರ ಸಂವಹನ ಮಾಡಿಕೊಂಡಿರುವುದು ಪತ್ರದಲ್ಲಿ ಉಲ್ಲೇಖವಾಗಿದೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.